image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೆದ್ದಾರಿ ಕಾಮಗಾರಿಯಿಂದ ಜನರಿಗೆ ತೊಂದರೆ ಕೊಡಬೇಡಿ: ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ

ಹೆದ್ದಾರಿ ಕಾಮಗಾರಿಯಿಂದ ಜನರಿಗೆ ತೊಂದರೆ ಕೊಡಬೇಡಿ: ಅಧಿಕಾರಿಗಳಿಗೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದ ಸಾರ್ವಜನಿಕರಿಗೆ ಮತ್ತು ಸಂಪರ್ಕ ರಸ್ತೆಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಕಟ್ಟನಿಟ್ಟಿನ ಸೂಚನೆ ನೀಡಿದ್ದಾರೆ.

ಉಪ್ಪಿನಂಗಡಿ ಸಮೀಪದ ಕರ್ವೆಲು, ಪೆರ್ನೆ ಹಾಗೂ ಬಿಳಿಯೂರು ಭಾಗಗಳಲ್ಲಿ ಸರ್ವಿಸ್ ರಸ್ತೆಗಳಿಲ್ಲದೆ, ಸಂಪರ್ಕ ರಸ್ತೆಗಳಿಗೆ ಮಣ್ಣು ಹಾಕಿ ಮುಚ್ಚಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಪ್ರೋಜೆಕ್ಟ್ ಡೈರೆಕ್ಟರ್ ಅಬ್ದುಲ್ ಜಾವೆದ್ ಹಾಗೂ ಇಂಜಿನಿಯರ್‌ಗಳನ್ನು ತಮ್ಮ ಕಚೇರಿಗೆ ಕರೆಸಿದ ಶಾಸಕರು, ಸ್ಥಳೀಯರ ಸಮಸ್ಯೆಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದರು.

ಅಭಿವೃದ್ಧಿ ಅಗತ್ಯ, ಆದರೆ ರಸ್ತೆ ಅಗಲೀಕರಣದ ನೆಪದಲ್ಲಿ ಜನರಿಗೆ ತೊಂದರೆಯಾಗಬಾರದು. ಯು-ಟರ್ನ್ ಬದಲಾವಣೆಯಿಂದಾಗಿ ಸಾರ್ವಜನಿಕರು ಕಿಲೋಮೀಟರ್‌ಗಟ್ಟಲೆ ಸುತ್ತು ಬಳಸಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶಾಲೆಗಳು, ದೇವಸ್ಥಾನ ಹಾಗೂ ಮಸೀದಿಗಳಿರುವ ಭಾಗಗಳಲ್ಲಿ ಸೂಕ್ತವಾಗಿ ಸರ್ವಿಸ್ ರಸ್ತೆ ಮತ್ತು ಯು-ಟರ್ನ್‌ಗಳನ್ನು ನೀಡಬೇಕು. ಸಂಪರ್ಕ ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿರುವ ಮಣ್ಣಿನ ರಾಶಿಯನ್ನು ತಕ್ಷಣ ತೆರವುಗೊಳಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅಪಘಾತ ವಲಯಗಳಲ್ಲಿ ಯು-ಟರ್ನ್‌ಗಳನ್ನು ಕೊಡಬಾರದು ಎಂದು ಶಾಸಕರು ನಿರ್ದೇಶಿಸಿದರು. ಈ ಸಭೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ. ತೌಸೀಫ್ ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ