image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಂಆರ್‌ಪಿಎಲ್‌ನಲ್ಲಿ ಸ್ಫೋಟ ಹಿನ್ನಲೆ ತುರ್ತು ಸುರಕ್ಷತಾ ಕ್ರಮಕ್ಕೆ ಸೂಚನೆ: ಅಧಿಕಾರಿಗಳ ಸ್ಪಷ್ಟನೆ

ಎಂಆರ್‌ಪಿಎಲ್‌ನಲ್ಲಿ ಸ್ಫೋಟ ಹಿನ್ನಲೆ ತುರ್ತು ಸುರಕ್ಷತಾ ಕ್ರಮಕ್ಕೆ ಸೂಚನೆ: ಅಧಿಕಾರಿಗಳ ಸ್ಪಷ್ಟನೆ

ಮಂಗಳೂರಿನ ಎಂಆರ್‌ಪಿಎಲ್ (MRPL) ತೈಲ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ಹಾಗೂ ಸುರಕ್ಷತಾ ಕಾರ್ಯಾಚರಣೆಯನ್ನು ಭರದಿಂದ ಸಾಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಘಟನೆ ಸಂಭವಿಸಿದ ತಕ್ಷಣದಿಂದಲೇ ಎಂ.ಆರ್.ಪಿ.ಎಲ್ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಬಜ್ಪೆ ಪಟ್ಟಣ ಪಂಚಾಯತ್ ಹಾಗೂ ಅಗ್ನಿಶಾಮಕ ದಳದ ಉನ್ನತಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸ್ಫೋಟದ ನಂತರದ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಅಗತ್ಯ ಸಿದ್ಧತೆಗಳೊಂದಿಗೆ ಸಂಪೂರ್ಣ ಸನ್ನದ್ಧವಾಗಿರಲು ಸೂಚನೆ ನೀಡಲಾಗಿದೆ. ದುರಂತದ ಸ್ಥಳದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಭೀತಿ ಅಥವಾ ಆತಂಕಕ್ಕೆ ಒಳಗಾಗಬಾರದು ಎಂದು ಕೋರಲಾಗಿದೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಇಂದು ಬೆಳ್ತಂಗಡಿಯಲ್ಲಿ ಪೂರ್ವನಿಗದಿಯಾಗಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಪ್ರತ್ಯಕ್ಷವಾಗಿ ಪರಿಸ್ಥಿತಿಯ ಪರಿಶೀಲನೆ ನಡೆಸಲು ಮತ್ತು ಸ್ಥಳದಲ್ಲೇ ಇದ್ದು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ವಹಿಸಲು ಘಟನಾ ಸ್ಥಳಕ್ಕೆ ತೆರಳಲಾಗುತ್ತಿದೆ.

ಈ ಕಷ್ಟಕರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಸಂಯಮ ಕಾಪಾಡಿಕೊಳ್ಳಬೇಕು ಎಂದು ವಿನಂತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಾಗಲಿ ಅಥವಾ ಸಾರ್ವಜನಿಕ ವಲಯದಲ್ಲಾಗಲಿ ಯಾವುದೇ ರೀತಿಯ ವದಂತಿಗಳು ಅಥವಾ ತಪ್ಪು ಮಾಹಿತಿಗಳನ್ನು ಹರಡದಂತೆ ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮಿಸುತ್ತಿರುವ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

Category
ಕರಾವಳಿ ತರಂಗಿಣಿ