image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

‘ದಕ್ಷಿಣ ಕನ್ನಡ’ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ವೇದಿಕೆ ಮನವಿ

‘ದಕ್ಷಿಣ ಕನ್ನಡ’ ಐತಿಹಾಸಿಕ ಹೆಸರನ್ನೇ ಉಳಿಸಿ: ಸರ್ಕಾರಕ್ಕೆ ವೇದಿಕೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಾಯಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ, ‘ದಕ್ಷಿಣ ಕನ್ನಡ’ ಎಂಬ ಹೆಸರನ್ನೇ ಮುಂದುವರಿಸಬೇಕೆಂದು ‘ದಕ್ಷಿಣ ಕನ್ನಡ ಉಳಿಸಿ ವೇದಿಕೆ’ ಹಾಗೂ ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು ಮತ್ತು ಸಾಹಿತಿಗಳು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ, ಈ ಬೇಡಿಕೆಯು ಮಂಗಳೂರಿನ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದರೂ, 'ದಕ್ಷಿಣ ಕನ್ನಡ' ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ 150 ವರ್ಷಕ್ಕೂ ಹೆಚ್ಚಿನ ಆಡಳಿತಾತ್ಮಕ ಇತಿಹಾಸವಿದ್ದು, ಹಿಂದೆ ಇದನ್ನು ‘ಸೌತ್ ಕೆನರಾ’ ಅಥವಾ ‘ಸೌತ್ ಕನಾರಾ’ ಎಂದು ಕರೆಯಲಾಗುತ್ತಿತ್ತು. 1977ರ ಜನವರಿಯಲ್ಲಿ ಕರ್ನಾಟಕ ಸರ್ಕಾರವು ‘ಸೌತ್ ಕೆನರಾ’ ಹೆಸರನ್ನು ‘ದಕ್ಷಿಣ ಕನ್ನಡ’ ಎಂದು ಬದಲಾಯಿಸಿದ್ದು, ಪ್ರಸ್ತುತ ಈ ಹೆಸರು ಸುಮಾರು ಐದು ದಶಕಗಳ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ. 1997ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯನ್ನು ಪ್ರತ್ಯೇಕಿಸಿದಾಗಲೂ ಉಳಿದ ಭಾಗಕ್ಕೆ ‘ದಕ್ಷಿಣ ಕನ್ನಡ’ ಎಂಬ ಹೆಸರನ್ನೇ ಮುಂದುವರಿಸಲಾಗಿತ್ತು. ಜಿಲ್ಲೆಯ ಕೇಂದ್ರ ಮಂಗಳೂರು ಎಂಬ ಕಾರಣಕ್ಕೆ ಜಿಲ್ಲೆಯ ಹೆಸರನ್ನೂ ಮಂಗಳೂರು ಎಂದೇ ಕರೆಯಬೇಕಾದ ಆಡಳಿತಾತ್ಮಕ ಅನಿವಾರ್ಯತೆ ಇಲ್ಲವೆಂದು, ಪುತ್ತೂರು, ಬೆಳತಂಗಡಿ, ಸುಳ್ಯ, ಬಂಟವಾಳ, ಮೂಡುಬಿದಿರೆ ಹಾಗೂ ಮುಲ್ಕಿ ಮುಂತಾದ ಅನೇಕ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳು ಇದರ ವಿಶಾಲ ಅಸ್ತಿತ್ವದ ಭಾಗವಾಗಿವೆ ಎಂದು ವಿವರಿಸಲಾಗಿದೆ.

ಹೆಸರು ಬದಲಾಯಿಸುವುದರಿಂದ ಐತಿಹಾಸಿಕ ದಾಖಲೆಗಳು, ಪುಸ್ತಕಗಳು, ನಕ್ಷೆಗಳು, ಶೈಕ್ಷಣಿಕ, ಆಡಳಿತಾತ್ಮಕ, ಕಾನೂನು ಹಾಗೂ ಸಾಂಸ್ಕೃತಿಕ ಉಲ್ಲೇಖಗಳಲ್ಲಿ ಅಪಾರ ಪ್ರಮಾಣದ ಬದಲಾವಣೆಗಳನ್ನು ಮಾಡುವ ಅಗತ್ಯ ಉಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದನ್ನು ಸ್ವಾಗತಿಸಿರುವ ವೇದಿಕೆಯು, ಈ ಪ್ರಕ್ರಿಯೆಯನ್ನು ಕೇವಲ ಮಂಗಳೂರು ನಗರಕ್ಕೆ ಸೀಮಿತಗೊಳಿಸದೆ ಜಿಲ್ಲೆಯ ಎಲ್ಲ ತಾಲೂಕುಗಳು, ಪಟ್ಟಣಗಳು, ಗ್ರಾಮಗಳ ಜನರು ಹಾಗೂ ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು ಸೇರಿದಂತೆ ಪ್ರಮುಖ ಪಾಲುದಾರರನ್ನು ಒಳಗೊಂಡು ವ್ಯಾಪಕ ಹಾಗೂ ಪಾರದರ್ಶಕವಾಗಿ ನಡೆಸಬೇಕೆಂದು ಆಗ್ರಹಿಸಿದೆ. ಮಂಗಳೂರಿನ ಬಾಲ್ಮಠದಲ್ಲಿರುವ ಸಂಸ್ಥೆಯ ಕಚೇರಿಯಿಂದ ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆನೆಟ್ ಅಮ್ಮಣ್ಣ, ಪ್ರೊ| ಕೃಷ್ಣಮೂರ್ತಿ, ವಿಲಿಯಂ ಪಾಯ್ಸ್ ಹಾಗೂ ಸ್ಟೀವನ್ ಪಾಯ್ಸ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ