image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ರಿಕ್ಷಾ ಚಾಲಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರಿನಲ್ಲಿ ರಿಕ್ಷಾ ಚಾಲಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು : ಮಂಗಳೂರು ಆಟೋರಿಕ್ಷಾ ಚಾಲಕ ಮತ್ತು ಕಾರು ಚಾಲಕ ಸಹಕಾರಿ ಸಂಘ ನಿಯಮಿತದ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಐವನ್‌ ಡಿʼಸೋಜಾ ಅವರ ನೇತೃತ್ವದಲ್ಲಿ ಮಂಗಳೂರಿನ ಸಾರ್ವಜನಿಕರಿಗೆ ಹಾಗೂ ರಿಕ್ಷಾ ಚಾಲಕರಿಗಾಗಿ ಉಚಿತ ಬಿ.ಪಿ., ಶುಗರ್‌ (ರಕ್ತದೊತ್ತಡ ಮತ್ತು ಮಧುಮೇಹ) ಹಾಗೂ ಹಿಮೋಗ್ಲೋಬಿನ್‌ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಎ.ಜೆ. ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಡಾ. ಕವಿತಾ ಡಿʼಸೋಜಾ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಭಾಗವಹಿಸಿದವರಿಗೆ ಸ್ಥಳದಲ್ಲೇ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ, ಮುಂದೆಯೂ ನಿಯತಕಾಲಿಕವಾಗಿ ತಪಾಸಣೆ ಮಾಡಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಕವಿತಾ ಡಿʼಸೋಜಾ ಅವರು, ರಕ್ತದೊತ್ತಡ ಮತ್ತು ಮಧುಮೇಹವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದರ ಜೊತೆಗೆ ಜೀವನಶೈಲಿಯಲ್ಲಿಯೂ ಅಗತ್ಯ ನಿಯಂತ್ರಣವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಐವನ್‌ ಡಿʼಸೋಜಾ ಮಾತನಾಡಿ, ಡಾ. ಕವಿತಾ ಡಿʼಸೋಜಾ ಅವರ ನೇತೃತ್ವದಲ್ಲಿ ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದ್ದು, ಅನೇಕ ಉಚಿತ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಹಲವಾರು ಜನರ ಆರೋಗ್ಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎ.ಜೆ. ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಡಾ. ಬಿಂದು ಹಾಗೂ ಕಾರ್ಯಕ್ರಮದ ಸಂಯೋಜಕರಾದ ಜಯರಾಮ್‌ ಅವರು ಆರೋಗ್ಯದ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸಂಘದ ಉಪಾಧ್ಯಕ್ಷರಾದ ಸಿರಿಲ್ ಡಿಸೋಜಾ, ನಿರ್ದೇಶಕರಾದ ಭಾಸ್ಕರ್ ರಾವ್, ಬಬಿತಾ ಡಿಸೋಜಾ, ಜೇಮ್ಸ್ ಮಾಡ್ತಾ, ವಸಂತ್ ಶೆಟ್ಟಿ, ಶೇಖರ್ ಹಾಗೂ ವಿದ್ಯಾ ತೋರಸ್ ಅವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ