ಕಡಬ: ಪಶ್ಚಿಮ ಘಟ್ಟಮತ್ತು ಜನ ವಸತಿ ಪ್ರದೇಶವನ್ನು ಗುರುತಿಸಲು ನಡೆದಿರುವ ಉಪಗ್ರಹ ಸರ್ವೇ ಬದಲು ಮಾನವ ಸರ್ವೇ ನಡೆಸಬೇಕು. ಅವೈಜ್ಞಾನಿಕ ರೀತಿಯಲ್ಲಿ ಮಾಡಿರುವ ಜನ ವಿರೋಧಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಸೆ. 30 ರಂದು ಕಡಬ ತಾಲೂಕು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನ ಸಭೆ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖ್ ದಾಮೋದರ ಗುಂಡ್ಯ ಅವರು ತಿಳಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಸ್ತೂರಿ ರಂಗನ್ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿರುವ ಪಶ್ಚಿಮ ಘಟ್ಟಸೂಕ್ಷ್ಮ ವಲಯವನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯು 2013 ರಿಂದ ನಿರಂತರವಾಗಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಜನರಿಗೆ ತಿಳಿವಳಿಕೆ ನೀಡಿ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸುತ್ತಾ ಬಂದಿದೆ. ಅದರ ಪರಿಣಾಮವಾಗಿ 7ನೇ ಕರಡು ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಜನರು ಸ್ವಯಂಪ್ರೇರಿತವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರನ್ನು ಸಂಪರ್ಕಿಸಿ ತಮ್ಮ ಗ್ರಾಮಗಳಲ್ಲಿ ಸಂಘಟನೆ ಬಲಪಡಿಸಿಬೇಕು ಮತ್ತು ವೇದಿಕೆಯ ನೇತೃತ್ವದಲ್ಲಿ ಅಧಿಸೂಚನೆಯನ್ನು ವಿರೋಧಿಸಿ ಹೋರಾಟ ಸಂಘಟಿಸಬೇಕು ಎಂದು ಬೇಡಿಕೆ ಇಟ್ಟಿರುವುದು ವೇದಿಕೆಯ ಮೇಲೆ ಜನರಿಗೆ ಇರುವ ವಿಶ್ವಾಸವನ್ನು ಸೂಚಿಸುತ್ತಿದೆ ಎಂದು ಅವರು ಹೇಳಿದರು. ವರದಿಯ ಅನುಷ್ಠಾನದ ಬಗ್ಗೆ 2015 ರಲ್ಲಿ ವಿಶೇಷ ಗ್ರಾಮಸಭೆಗಳನ್ನು ನಡೆಸಿ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಆ ವೇಳೆಯಲ್ಲಿ ಸರ್ವಾನುಮತದಿಂದ ಜನರು ವರದಿಯನ್ನು ಕೈಬಿಡುವಂತೆ ನಿರ್ಣಯಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ಬಾರಿ ಮತ್ತೆ ಅದೇ ರೀತಿ ಗ್ರಾಮಸಭೆಗಳನ್ನು ನಡೆಸಿ ಜನರ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಆದರೆ ಜನರ ಅಭಿಪ್ರಾಯಕ್ಕೆ ಈ ಬಾರಿಯೂ ಮನ್ನಣೆ ಸಿಗುತ್ತದೆ ಎನ್ನುವ ಭರವಸೆ ಇಲ್ಲ. ಆದುದರಿಂದ ಜನ ವಿರೋಧಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎನ್ನುವುದು ನಮ್ಮೆಲ್ಲರ ಒಕ್ಕೊರಳ ಆಗ್ರಹವಾಗಿದೆ. ಜನರ ಬೇಡಿಕೆಯನ್ನು ಸಂಬಂಧಪಟ್ಟರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಭಟನ ಸಭೆಗೆ ಜನರು ಬೃಹತ್ ಸಂಖ್ಯೆಯಲ್ಲಿ ಸೇರಬೇಕು ಎಂದು ಅವರು ಮನವಿ ಮಾಡಿದರು.
ವೇದಿಕೆಯ ತಾಲೂಕು ಪ್ರಮುಖ್ ಲೋಕಯ್ಯ ಪರವ ದೋಳ್ಪಾಡಿ ಅವರು ಮಾತನಾಡಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವ ನಿಟ್ಟಿನಲ್ಲಿ ರೈತ -ಧಾರ್ಮಿಕ ಚಳುವಳಿಯನ್ನು ಮುಂದಿನ ಹಂತದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ದೇವಸ್ಥಾನ, ದೈವಸ್ಥಾನ, ನಾಗ ಸಾನಿಧ್ಯಗಳು ಹಾಗೂ ಮತ ಧರ್ಮಗಳ ಆರಾಧನಾಲಯಗಳ ಪ್ರಮುಖರ ಸಹಯೋಗದಲ್ಲಿ ಈ ಹೋರಾಟವನ್ನು ಪ್ರಬಲವಾಗಿ ನಡೆಸಲಾಗುವುದು. ಯಾಕೆಂದರೆ ಬಹುತೇಕ ದೇವಸ್ಥಾನಗಳು, ದೈವಸ್ಥಾನಗಳು, ನಾಗ ಸನ್ನಿಧಿಗಳು, ಚರ್ಚುಗಳು ಹಾಗೂ ಮಸೀದಿಗಳು ಪ್ರಕೃತಿ ನಡುವೆ ಇವೆ. ವರದಿ ಜಾರಿಯಾದರೆ ನಮ್ಮ ಧಾರ್ಮಿಕ ಚಟುವಟಿಕೆಗಳಿಗೆ ಕೊಡಲಿಯೇಟು ಬೀಳುವುದು ಖಂಡಿತ. ಆದುದರಿಂದ ನಾವು ಆ ನಿಟ್ಟಿನಲ್ಲಿಯೂ ಯೋಚನೆ ಮಾಡಿ ಹೋರಾಟವನ್ನು ತೀವ್ರಗೊಳಿಸಬೇಕಿದೆ. ಸೆ. 30 ರಂದು ನಡೆಯುವ ಪ್ರತಿಭಟನೆಗೆ ಪಕ್ಷಾತೀತವಾಗಿ ಹಾಗೂ ಧರ್ಮಾತೀತವಾಗಿ ಎಲ್ಲರೂ ಆಗಮಿಸಿ ನಮ್ಮ ಒಗ್ಗಟ್ಟನ್ನು ತೋರ್ಪಡಿಸಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಮುಖರಾದ ರಮಾನಂದ ಎಣ್ಣೆಮಜಲು, ವಿನಯ ಬಳಕ್ಕ, ಯುವ ಪ್ರಮುಕ್ ಭವಿತ್ ಕುರೇಲು ದೋಳ್ಪಾಡಿ ಉಪಸ್ಥಿತರಿದ್ದರು.