ಮೂಡುಬಿದಿರೆ: ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಶಿಸ್ತು, ನೈತಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಸ್ಪಷ್ಟ ಗುರಿಗಳು ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗುತ್ತವೆ ಎಂದು ಖ್ಯಾತ ಯಕ್ಷಗಾನ ಅರ್ಥದಾರಿ ಹಾಗೂ ವಿದ್ವಾಂಸ ಪ್ರೊ. ಪವನ ಕಿರಣಕೆರೆ ತಿಳಿಸಿದರು.
ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್), ರೆಡ್‌ಕ್ರಾಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ವಿದ್ಯಾರ್ಥಿ ಜೀವನ ಹಾಗೂ ನೈತಿಕತೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಕಲಿಕೆಯ ಪ್ರಕ್ರಿಯೆಯು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ, ಜೀವನಾನುಭವಗಳ ಮೂಲಕವೂ ನಡೆಯುತ್ತದೆ. ಆಗಾಗ್ಗೆ ಗುರಿಗಳನ್ನು ಬದಲಾಯಿಸುವುದಕ್ಕಿಂತ, ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ಸ್ಪಷ್ಟ ಗುರಿಯನ್ನು ರೂಪಿಸಿಕೊಂಡು ಅದನ್ನು ಸಾಧಿಸಲು ನಿರಂತರವಾಗಿ ಪರಿಶ್ರಮಿಸಬೇಕು. ಪ್ರಾಮಾಣಿಕತೆ, ಜವಾಬ್ದಾರಿ, ಸಹಾನುಭೂತಿ ಹಾಗೂ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿ ದಸೆಯಲ್ಲೇ ಅಳವಡಿಸಿಕೊಂಡಾಗ ಸಮಾಜದಲ್ಲಿ ಗೌರವ ಹಾಗೂ ವಿಶ್ವಾಸ ಲಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್. ಮಾತನಾಡಿ, ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಾಮಾಜಿಕ ಜವಾಬ್ದಾರಿಯೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಳೂಣಕರ್ ಉಪಸ್ಥಿತರಿದ್ದರು. ಲಿಖಿತಾ ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ಸಿದ್ದಪ್ಪ ಸ್ವಾಗತಿಸಿದರು. ದೀಕ್ಷಿತಾ ಧನ್ಯವಾದ ಸಮರ್ಪಿಸಿದರು.