image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ ಉದ್ಘಾಟನೆ

ಉಜಿರೆ: ಪ್ರತಿದಿನ ಮನೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡುವುದರಿಂದ ಜೀವನ ಪಾವನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಲಾಗಿದ್ದ 28ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.

ಕಲಿಯುಗದಲ್ಲಿ ಅನ್ನ-ನೀರು ತೊರೆದು ತಪಸ್ಸು ಮಾಡುವುದು ಅಸಾಧ್ಯ. ಆದ್ದರಿಂದ ದೇವರು ನೀಡಿದ ತನು, ಮನ, ನಾಲಗೆ ಮತ್ತು ವಿವೇಕವನ್ನು ಬಳಸಿ ಭಜನೆ ಮಾಡಿದಾಗ ಸುಖ-ಶಾಂತಿ, ನೆಮ್ಮದಿಯೊಂದಿಗೆ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಧರ್ಮಸ್ಥಳದ ಚತುರ್ದಾನ ಪರಂಪರೆಯನ್ನು ಬೆಳೆಸುವುದರೊಂದಿಗೆ ಮನೆ-ಮನಗಳಲ್ಲಿ ಭಜನಾ ಸಂಸ್ಕೃತಿಯ ಜಾಗೃತಿ ಮೂಡಿಸುತ್ತಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ದಂಪತಿಯ ಸೇವಾಕಾರ್ಯವನ್ನು ಅವರು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಇಲ್ಲಿ ತರಬೇತಿ ಪಡೆದ ಭಜನಾಪಟುಗಳು ತಮ್ಮ ಊರಿನ ಪ್ರಗತಿಯ ರೂವಾರಿಗಳಾಗಬೇಕು ಮತ್ತು ಆದರ್ಶ ನಾಯಕರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಣಿಲದ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿದರು. ವೇದಿಕೆಯಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು. ವಿದೂಷಿ ಚೈತ್ರಾ ಭಟ್ ಧರ್ಮಸ್ಥಳ ಮತ್ತು ಬಳಗದವರಿಂದ ನಡೆದ ನೃತ್ಯ ಪ್ರದರ್ಶನ ಕಾರ್ಯಕ್ರಮದ ಆಕರ್ಷಣೆಯಾಗಿತ್ತು.

ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಧನ್ಯವಾದವಿತ್ತರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದ್ದು, ಡಾ. ಶಶಿಕಾಂತ ಜೈನ್ ಅವರ ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಬಾರಿಯ ಕಮ್ಮಟದಲ್ಲಿ 123 ಭಜನಾ ಮಂಡಳಿಗಳಿಂದ 204 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ