ಕಡಬ: ಕೈಗಳನ್ನು ಸೊಂಟದಲ್ಲಿ ಹಿಡಿದುಕೊಂಡು ಮುಂಗೈಗಳನ್ನು ಜೊತೆಯಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನಿರಂತರವಾಗಿ 30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಸಲ ಮುಟ್ಟಿಸುವ ಮೂಲಕ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಕ್ಷಾ ಡಿ. ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.
ಸೆಪ್ಟೆಂಬರ್ 26 ರಂದು ಕಾಲೇಜಿನ ಸಭಾಂಗಣದ ವೇದಿಕೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥರಾದ ಡಾ| ಮನೀಷ್ ವೈಷ್ಣೋಯಿ ಅವರ ಸಮ್ಮುಖದಲ್ಲಿ ಪ್ರದರ್ಶನ ನೀಡುವ ಮೂಲಕ ರಕ್ಷಾ ಡಿ. ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ರಕ್ಷಾ ಡಿ. ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸರ್ಟಿಫಿಕೇಟ್ ಹಸ್ತಾಂತರಿಸಿ ಮಾತನಾಡಿದ ಡಾ| ಮನೀಷ್ ವೈಷ್ಣೋಯಿ ಅವರು, ರಕ್ಷಾ ಡಿ. ಅವರ ಈ ವಿಶಿಷ್ಟ ಸಾಧನೆ ಮೆಚ್ಚುವಂತದ್ದು ಎಂದರು. ಅವರು ಸೊಂಟದಲ್ಲಿ ಕೈಗಳನ್ನು ಹಿಡಿದುಕೊಂಡು 30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಸಲ ಮುಂಗೈಗಳನ್ನು ಜೊತೆಯಾಗಿ ಹಿಂದಕ್ಕೆ ಹಾಗೂ ಮುಂದಕ್ಕೆ ಮುಟ್ಟಿಸುವ ಪ್ರದರ್ಶನ ನೀಡಿದ್ದಾರೆ. ಅವರ ಈ ಸಾಧನೆಯ ವಿಡಿಯೋ ದಾಖಲೀಕರಣ ಪರಿಶೀಲನೆ ನಡೆಸಿ ನಿಖರವಾಗಿ ಎಷ್ಟು ಸಲ ಮುಂಗೈಗಳನ್ನು ಮುಟ್ಟಿಸಿದ್ದಾರೆ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು, ಈ ದಿನ ರಾಮಕುಂಜಕ್ಕೆ ಸುದಿನ. ಇಲ್ಲಿನ ವಿದ್ಯಾರ್ಥಿನಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡುತ್ತಿರುವುದು ಇಲ್ಲಿನ ವಿದ್ಯಾಸಂಸ್ಥೆಗಳಿಗೆ ಹೆಮ್ಮೆಯ ವಿಷಯವಾಗಿದೆ. ರಾಮಕುಂಜದ ವಿದ್ಯಾಸಂಸ್ಥೆಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಸಂಸ್ಥೆಯ ಈ ಸಾಧನೆ ರಾಷ್ಟ್ರಮಟ್ಟಕ್ಕೂ ಪಸರಿಸಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಮಾತನಾಡಿ, ಗ್ರಾಮೀಣ ಪ್ರದೇಶದಲ್ಲೇ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವೊಮ್ಮೆ ನಮ್ಮೊಳಗಿನ ಶಕ್ತಿಯ ಅರಿವು ನಮಗಿರುವುದಿಲ್ಲ. ರಕ್ಷಾ ಅವರು ಮಾಡಿರುವ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್. ರಾಧಾಕೃಷ್ಣ ಅವರು ಮಾತನಾಡಿ, ಇದೇ ಮೊದಲ ಬಾರಿಗೆ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆದಿದೆ. ರಕ್ಷಾ ಡಿ. ಅವರ ಸಾಧನೆಯಿಂದ ಸಂಸ್ಥೆಗೂ ಉನ್ನತ ಗರಿ ಸಿಕ್ಕಿದೆ. ಮುಂದೊಂದು ದಿನ ಪೇಜಾವರ ಶ್ರೀಗಳ ಸಮ್ಮುಖದಲ್ಲಿ ರಕ್ಷಾ ಡಿ. ಅವರನ್ನು ಸನ್ಮಾನಿಸುವುದಾಗಿ ತಿಳಿಸಿದರು.
ಅತಿಥಿಗಳಾಗಿದ್ದ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಡಬ ತಾಲೂಕು ಅಧ್ಯಕ್ಷ ಸತೀಶ್ ಕೆ. ಐತ್ತೂರು, ರಾಮಕುಂಜ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪ್ರಶಾಂತ್ ಆರ್.ಕೆ., ಸುಚೇತಾ ಬರೆಂಬೆಟ್ಟು, ಮಾಲತಿ ಕದ್ರ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ, ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ಧಕ ಸಭಾದ ಕೋಶಾಧಿಕಾರಿ ಕೆ. ಸೇಸಪ್ಪ ರೈ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಕೊಯಿಲ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಬೇಂಗದಪಡ್ಪು, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟೇಶ್ ದಾಮ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಚಂದ್ರಶೇಖರ ಕೆ. ಸ್ವಾಗತಿಸಿ, ಉಪನ್ಯಾಸಕ ಸುಬ್ರಹ್ಮಣ್ಯ ಕಾರಂತ್ ವಂದಿಸಿದರು. ಉಪನ್ಯಾಸಕಿ ಸಪ್ನಾ ಕಾರ್ಯಕ್ರಮ ನಿರೂಪಿಸಿದರು.