image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೆಜಮಾಡಿಯಲ್ಲಿ ವಿಶಿಷ್ಟ ಸ್ವಚ್ಛತಾ ಅಭಿಯಾನ: ಮುಂದಿನ ಪೀಳಿಗೆಯಲ್ಲಿ ಪರಿಸರ ಕಾಳಜಿ ಮೂಡಿಸಲು ವಿವೇಕ್ ಆಳ್ವ ಕರೆ

ಹೆಜಮಾಡಿಯಲ್ಲಿ ವಿಶಿಷ್ಟ ಸ್ವಚ್ಛತಾ ಅಭಿಯಾನ: ಮುಂದಿನ ಪೀಳಿಗೆಯಲ್ಲಿ ಪರಿಸರ ಕಾಳಜಿ ಮೂಡಿಸಲು ವಿವೇಕ್ ಆಳ್ವ ಕರೆ

ಹೆಜಮಾಡಿ : ಹೆಜಮಾಡಿ ಅಳಿವೆ ಪ್ರದೇಶದ ಬೀಚ್‌ನಲ್ಲಿ ಆಳ್ವಾಸ್ ಹಾಗೂ ಮೂಡುಬಿದಿರೆ ಪರಿಸರದ ಕುಟುಂಬಗಳ ಸದಸ್ಯರು, ಮಕ್ಕಳು ಮತ್ತು ಪೋಷಕರು ಒಟ್ಟಾಗಿ ಸೇರಿ ಸ್ವಚ್ಛತೆ ಹಾಗೂ ಪರಿಸರ ಜಾಗೃತಿ ಮೂಡಿಸುವ ವಿಶಿಷ್ಟ ಅಭಿಯಾನವನ್ನು ಆಯೋಜಿಸಿದ್ದರು. ಕೇವಲ ಬೀಚ್ ಸ್ವಚ್ಛಗೊಳಿಸುವುದಷ್ಟೇ ಅಲ್ಲದೆ, ಮುಂದಿನ ಪೀಳಿಗೆಗೆ ಪ್ರಕೃತಿಯ ವಾಸ್ತವ ಸ್ಥಿತಿಯನ್ನು ಪ್ರತ್ಯಕ್ಷವಾಗಿ ಪರಿಚಯಿಸಿ, ಅವರಲ್ಲಿ ಜವಾಬ್ದಾರಿಯುತ ಮನೋಭಾವ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸ್ವಚ್ಛತೆಗಿಂತ ಜಾಗೃತಿ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು. ಮಕ್ಕಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮದೇ ಮನೆಯ ಭಾಗವೆಂದು ಭಾವಿಸಿದಾಗ ಮಾತ್ರ ನಿಜವಾದ ಪರಿಸರ ಕಾಳಜಿ ರೂಪುಗೊಳ್ಳುತ್ತದೆ. ಪ್ರಕೃತಿ ಸಂರಕ್ಷಣೆ ಎನ್ನುವುದು ಕೇವಲ ಸರ್ಕಾರ ಅಥವಾ ಪರಿಸರ ಕಾರ್ಯಕರ್ತರ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಂದು ಕುಟುಂಬದ ಹೊಣೆಗಾರಿಕೆಯಾಗಿದೆ. ಪೋಷಕರು ಅನುಸರಿಸುವ ಪರಿಸರ ಸ್ನೇಹಿ ನಡವಳಿಕೆ ಮಕ್ಕಳ ಮೇಲೆಯೂ ನೇರ ಪರಿಣಾಮ ಬೀರುವುದರಿಂದ ಜಾಗೃತಿಯು ಮನೆಯಿಂದಲೇ ಆರಂಭವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ರಾಷ್ಟ್ರೀಯ ಪರಿಸರ ಕಾಳಜಿ ಒಕ್ಕೂಟದ ಶಶಿಧರ ಶೆಟ್ಟಿ ಮಾತನಾಡಿ, ಕಸ ಚೆಲ್ಲಿದ ನಂತರ ತೆರವುಗೊಳಿಸುವುದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ಪ್ರತಿಯೊಬ್ಬರೂ ಮನೆಯಲ್ಲೇ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಿಸಿ ಮರುಬಳಕೆಗೆ ಯೋಗ್ಯವಾಗುವಂತೆ ವಿಲೇವಾರಿ ಮಾಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಬಲಗೊಂಡಾಗ ಮಾತ್ರ ಸಾರ್ವಜನಿಕ ಸ್ಥಳಗಳು ಹಾಗೂ ಜಲಮೂಲಗಳಿಗೆ ಕಸ ಸೇರುವುದನ್ನು ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಈ ಅಭಿಯಾನದಲ್ಲಿ ಭಾಗವಹಿಸಿದ್ದ ಕುಟುಂಬದ ಸದಸ್ಯರು ಹಾಗೂ ಮಕ್ಕಳು ಉತ್ಸಾಹದಿಂದ ಬೀಚ್ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಗಾಜು, ಫೋಮ್ ಸೇರಿದಂತೆ ಪರಿಸರಕ್ಕೆ ಹಾನಿಕಾರಕವಾದ ವಿವಿಧ ರೀತಿಯ ತ್ಯಾಜ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ಮೂಲದಲ್ಲೇ ವಿಂಗಡಿಸಿ ಸೂಕ್ತ ವಿಲೇವಾರಿಗೆ ಸಹಕರಿಸಿದರು.

Category
ಕರಾವಳಿ ತರಂಗಿಣಿ