ಮಂಗಳೂರು : ಮಂಗಳೂರು ನಗರದ ಮಹಾಕಾಳಿ ಪಡ್ಪುವಿನ ಸರ್ಕಾರಿ ಶಾಲಾ ಮೈದಾನವನ್ನು ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತವಾಗಿ ಅಭಿವೃದ್ಧಿಪಡಿಸುವಂತೆ ಐವನ್ ಡಿʼಸೋಜಾ ಸಲಹೆ ನೀಡಿದ್ದಾರೆ. ಈ ಮೈದಾನದಲ್ಲಿ ಈಗಾಗಲೇ ಪೆವಿಲಿಯನ್ ನಿರ್ಮಿಸಲಾಗಿದ್ದರೂ, ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಮಂಗಳೂರಿನಲ್ಲಿ ಸಾರ್ವಜನಿಕ ಆಟೋಟ ಹಾಗೂ ಇತರ ಚಟುವಟಿಕೆಗಳಿಗೆ ಸ್ಥಳಗಳು ಸೀಮಿತವಾಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರಿಗಾಗಿ ಈ ಮೈದಾನವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ.
ಸ್ಥಳೀಯ ಸಾರ್ವಜನಿಕರೊಂದಿಗೆ ಕ್ರೀಡಾ ಮೈದಾನಕ್ಕೆ ಭೇಟಿ ನೀಡಿ ಚರ್ಚಿಸಿದ ಸಂದರ್ಭದಲ್ಲಿ, ಈ ಮೈದಾನವನ್ನು ಸಾರ್ವಜನಿಕ ಕ್ರೀಡಾ ಮೈದಾನವಾಗಿಯೇ ಉಳಿಸಬೇಕು ಮತ್ತು ಯಾವುದೇ ಇತರ ಉದ್ದೇಶಕ್ಕೆ ಬಳಸಬಾರದು ಎಂದು ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಐವನ್ ಡಿʼಸೋಜಾರವರು, ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಿ ಮೈದಾನದಲ್ಲಿ ಮೇಲ್ಛಾವಣಿಯೊಂದಿಗೆ ಸ್ಟೇಡಿಯಂ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಅಲ್ಲದೆ, ಮೈದಾನದ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸ್ಥಳೀಯ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಅಭಿವೃದ್ಧಿ ಸಮಿತಿಯನ್ನು ರಚಿಸಲು ಸೂಚಿಸಿದರು. ಈ ಮೈದಾನವನ್ನು ಬೇರೆ ಉದ್ದೇಶಗಳಿಗೆ ಬಳಸದೆ, ಸಾರ್ವಜನಿಕ ಕ್ರೀಡಾ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಉಪಯೋಗಿಸುವಂತೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಯುವ ಮುಖಂಡರಾದ ನವಾಜ್ ಜೆಪ್ಪು, ಸುಜಿತ್ ಪ್ರದೀಪ್, ಶ್ರೀಮತಿ ಶಾಲಿನಿ, ಲತೀಪ್ ಅಬ್ದುಲ್ ಸಲೀಂ ಸಸ್ಯೇಂದ್ರ, ಪುಷ್ಪರಾಜ್, ಕಿಶನ್ ಕುಮಾರ್, ಉಮೇಶ್, ಅಶೋಕ್, ವಿವೇಕ್ ಮುಂತಾದವರು ಉಪಸ್ಥಿತರಿದ್ದರು.