ಮಂಗಳೂರು: ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ವಿಟಿಯು ಕಾಲೇಜು ಬಳಿಯ ಕಂಬಳ ಮೈದಾನದಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 150ರಿಂದ 160 ಜೋಡಿ ಕೋಣಗಳು ಇದರಲ್ಲಿ ಭಾಗವಹಿಸಲಿವೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳಕ್ಕೆ ಸಿದ್ಧತೆ ನಡೆದಿದ್ದು, ಸಾವಿರಾರು ಮಂದಿ ಕ್ರೀಡೆ ವೀಕ್ಷಿಸಲು ಆಗಮಿಸುವ ನಿರೀಕ್ಷೆಯಿದೆ. ಮುಖ್ಯ ವೇದಿಕೆಯೊಂದಿಗೆ ಗಣ್ಯರು ಹಾಗೂ ಸಾರ್ವಜನಿಕರಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಕರಾವಳಿ ಶೈಲಿಯ ಆಹಾರ ಮಳಿಗೆಗಳು, ವಾಹನ ನಿಲುಗಡೆ, ಶೌಚಾಲಯ, ಸ್ನಾನಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಕಂಬಳದ ಓಟಕ್ಕಾಗಿ ಎರಡು ಟ್ರ್ಯಾಕ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲು ಈಗಾಗಲೇ ನಿರ್ಧರಿಸಲಾಗಿದೆ. ದೊಡ್ಡ ಜೋಡಿ ಕೋಣಗಳಿಗೆ ರೂ. 65 ಸಾವಿರ ಹಾಗೂ ಸಣ್ಣ ಜೋಡಿ ಕೋಣಗಳಿಗೆ ರೂ. 50 ಸಾವಿರದ ಜೊತೆಗೆ ಚಿನ್ನದ ಪದಕಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರ ಬೇಡಿಕೆಯ ಹಿನ್ನೆಲೆಯಲ್ಲಿ ಬಹುಮಾನ ಹಾಗೂ ಪದಕಗಳ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಶಾಸಕರು ತಿಳಿಸಿದರು.
ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದ್ದು, ಕರಾವಳಿಯಿಂದ ಕಂಬಳದ ಕೋಣಗಳನ್ನು ಮೈಸೂರಿಗೆ ಕರೆತರುವ ಸಂದರ್ಭದಲ್ಲಿ ಅವುಗಳ ಸುರಕ್ಷತೆ ಹಾಗೂ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು. ಕಂಬಳದ ಜೊತೆಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ಮತ್ತು ಸಂಸ್ಕೃತಿಯನ್ನು ಮೈಸೂರು ದಸರಾ ಮೂಲಕ ಪರಿಚಯಿಸಲು ವಿಶೇಷ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಕೋಣಗಳ ಮಾಲೀಕರಿಗೆ ದಸರಾ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಇತರ ಗೌರವಗಳನ್ನು ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಮುಖ್ಯಮಂತ್ರಿ ಹಾಗೂ ಜನಪ್ರತಿನಿಧಿಗಳ ನಿರ್ಧಾರದಂತೆ ಮೈಸೂರಿನಲ್ಲಿ ಕಂಬಳ ಆಯೋಜನೆಗೊಳ್ಳುತ್ತಿರುವುದು ಕರಾವಳಿ ಕರ್ನಾಟಕಕ್ಕೆ ದೊರೆತಿರುವ ದೊಡ್ಡ ಅವಕಾಶವಾಗಿದೆ ಎಂದರು. ಕಂಬಳ ಕೇವಲ ಕ್ರೀಡೆಯಲ್ಲ, ಅದು ಕರಾವಳಿ ಕರ್ನಾಟಕದ ರೈತ ವರ್ಗದ ಬದುಕು, ಸಂಸ್ಕೃತಿ ಮತ್ತು ಜಾನಪದ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಕ್ರೀಡೆಯಾಗಿದೆ. ಹೀಗಾಗಿ ಮೈಸೂರಿನ ಜನತೆ ಕೂಡ ಈ ಕಂಬಳವನ್ನು ಅತ್ಯುತ್ಸಾಹದಿಂದ ಸ್ವಾಗತಿಸಿ, ಯಶಸ್ವಿಗೊಳಿಸಬೇಕಿದೆ ಎಂದು ಅವರು ಹೇಳಿದರು.