ಸುರತ್ಕಲ್: ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ, ಬಂಟರ ಸಂಘ (ರಿ) ಸುರತ್ಕಲ್ ಮತ್ತು ಲಯನ್ಸ್ ಕ್ಲಬ್ ಸುರತ್ಕಲ್ ಇವುಗಳ ಸಹಯೋಗದೊಂದಿಗೆ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ 'ಸಸ್ಯೋತ್ಸವ, ಆಹಾರ ಮೇಳ ಹಾಗೂ ಹೋಳಿಗೆ ಹಬ್ಬ'ದ ಉದ್ಘಾಟನಾ ಸಮಾರಂಭವು ಶುಕ್ರವಾರ ಬೆಳಗ್ಗೆ ಸುರತ್ಕಲ್ ಬಂಟರ ಭವನದಲ್ಲಿ ಅದ್ಧೂರಿಯಾಗಿ ಜರುಗಿತು.
ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಟರ ಭವನದಲ್ಲಿ ಪ್ರಪ್ರಥಮ ಬಾರಿಗೆ ಇಂತಹ ನೂತನ ಹಾಗೂ ಉಪಯುಕ್ತ ಸಸ್ಯೋತ್ಸವ ಹಾಗೂ ಆಹಾರ ಮೇಳ ಆಯೋಜಿಸಿರುವುದು ಶ್ಲಾಘನೀಯ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಕೋರಿ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ರೈತ ಕುಡ್ಲ ಪ್ರತಿಷ್ಠಾನ, ಬಂಟರ ಸಂಘ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇಲ್ಲಿ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಬಟ್ಟೆಬರೆಗಳು, ಹೂವು ಹಾಗೂ ತರಕಾರಿ ಸಸ್ಯಗಳು, ವಿವಿಧ ತಿಂಡಿ-ತಿನಿಸುಗಳು ಹಾಗೂ ನಾನಾ ಬಗೆಯ ರುಚಿಕರ ಆಹಾರ ಖಾದ್ಯಗಳು ಲಭ್ಯವಿವೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಮಾತನಾಡಿ, ರೈತ ಕುಡ್ಲ ಪ್ರತಿಷ್ಠಾನವು ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಅತ್ಯುತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೇಳವು ಯಶಸ್ವಿಯಾಗಿರಲು ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಸುರತ್ಕಲ್ ಅಧ್ಯಕ್ಷ ಜಯೇಶ್ ಗೋವಿಂದ್, ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಬಂಟರ ಸಂಘ ಸುರತ್ಕಲ್ ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜಾ ಟಿ. ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಆಪದ್ಭಾಂಧವ ಸಂಘಟನೆಯ ಉಮೇಶ್ ಇಡ್ಯಾ ಹಾಗೂ ರೈತಕುಡ್ಲ ಪ್ರತಿಷ್ಠಾನದ ಕಾರ್ಯದರ್ಶಿ ಲತೀಶ್ ಮಳಲಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಟರ ಸಂಘದ ಕೃಷಿ ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಖಂಡಿಗೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೈತಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ, ಲಯನ್ ರಾಜಯ್ಯ ವಂದನಾರ್ಪಣೆಗೈದರು.