ಮಂಗಳೂರು: ಸಮಾನತೆ ಎಂಬುದು ಭಾರತೀಯ ಸಂವಿಧಾನದ ಮೂಲ ಆಶಯವಾಗಿದೆ. ಪ್ರಜೆಗಳಿಗೆ ಮೂಲಭೂತ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸಿರುವ ದೇಶದ ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಜವಾಬ್ದಾರಿಯಾಗಿದೆ ಎಂದು ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ನಗರದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಅಳವಡಿಸಲಾದ ಭಾರತ ಸಂವಿಧಾನದ ಪೀಠಿಕೆ ಫಲಕವನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿದರು. ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಪರಿಗಣಿಸಲಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಿಧಾನದ ಪೀಠಿಕೆ ಫಲಕವನ್ನು ಸ್ಥಾಪಿಸಿರುವುದು ಅತ್ಯಂತ ಮಾದರಿಯಾದ ಮತ್ತು ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ವಿಲ್ಫ್ರೆಡ್ ಡಿಸೋಜಾ, ಕೋಶಾಧಿಕಾರಿ ವಿಜಯ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಕುಮಾರ್ ಎಂ. ಹಾಗೂ ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.