ಮಂಗಳೂರು : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಮಿಷನ್ ಸಮಿತಿ ಸಭೆ ಜರುಗಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಯೋಜನೆಯನ್ನು (DSDP) ವಿಸ್ತೃತವಾಗಿ ಚರ್ಚಿಸಿ ಅಂತಿಮಗೊಳಿಸಲಾಯಿತು.
ಸರ್ಕಾರದ ನಿರ್ದೇಶನದಂತೆ ಸಿದ್ಧಪಡಿಸಲಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಯೋಜನೆಯ ವರದಿಯನ್ನು ನೋಡಲ್ ಅಧಿಕಾರಿ ಹರೀಶ್ ಸಿ.ಪಿ. ಅವರು ಪ್ರಾತ್ಯಕ್ಷಿಕೆ ಮೂಲಕ ಸಭೆಯಲ್ಲಿ ಮಂಡಿಸಿದರು. ಜಿಲ್ಲೆಯ ಪ್ರೌಢಶಾಲೆಗಳು, ಪಿಯುಸಿ, ಪದವಿ ಕಾಲೇಜುಗಳು, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಸಂಸ್ಥೆಗಳು, ಪ್ರಮುಖ ಕೈಗಾರಿಕೆಗಳು ಹಾಗೂ ವಿವಿಧ ಸರ್ಕಾರಿ ಇಲಾಖೆಗಳಿಂದ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಕ್ರೋಢೀಕರಿಸಿ, ಜಿಲ್ಲೆಯಲ್ಲಿ ಕೌಶಲ್ಯಗಳ ಪೂರೈಕೆ ಮತ್ತು ಬೇಡಿಕೆಗೆ ಸಂಬಂಧಿಸಿದ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದೆ.
ಸಭೆಯಲ್ಲಿ ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯವಿರುವ ನೂತನ ಕೌಶಲ್ಯಗಳ ಬೇಡಿಕೆ, ತರಬೇತಿಗಳ ಗುಣಮಟ್ಟ ಹೆಚ್ಚಳ ಹಾಗೂ ಮಾಹಿತಿ ತಂತ್ರಜ್ಞಾನ (IT) ಮತ್ತು ವೈದ್ಯಕೀಯ ಕ್ಷೇತ್ರದ ಪೂರೈಕೆ-ಬೇಡಿಕೆಗಳ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು. ಬೈಕಂಪಾಡಿಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯಲು ದೂರದ ಊರುಗಳಿಂದ ಬರುವ ಶಿಕ್ಷಣಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸುವುದು, ವಿದ್ಯುತ್ ಚಾಲಿತ ವಾಹನ (EV) ತರಬೇತಿ, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಹಾಗೂ ಮಹಿಳಾ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಆದ್ಯತೆಯ ಮೇಲೆ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಯಿತು.
ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಮ್ಯಾಪಿಂಗ್ ಮಾಡುವುದು ಮತ್ತು ಹೊರ ಜಿಲ್ಲೆಗಳ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿರುವುದರಿಂದ ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ಸ್ಥಾನಮಾನ ಹಾಗೂ ಅವಕಾಶಗಳನ್ನು ಕಲ್ಪಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳು ಕೌಶಲ್ಯ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿ, ಶೀಘ್ರ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ, ಯೋಜನಾ ನಿರ್ದೇಶಕ ಜಯರಾಮ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಕೆನರಾ ಛೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷ ಅಬ್ದುಲ್ ಮುದಸರ್, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ. ಪೂಜಾರಿ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷೆ ಕುಸುಮ, ಕೆಡಿಇಎಂ ಪ್ರತಿನಿಧಿ ವೈಶಾಕ್ ಪೈ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿದ್ದರು.