ಮಂಗಳೂರು: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಕೃತಜ್ಞತೆಯಿಂದ ಆಚರಿಸಲಾಯಿತು. ರೋಗಿಗಳಿಗೆ ಹಾಗೂ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಅಹೋರಾತ್ರಿ ಸುರಕ್ಷಿತ ಮತ್ತು ಸರಿಯಾದ ಸಮಯಕ್ಕೆ ಔಷಧಗಳನ್ನು ತಲುಪಿಸುವಲ್ಲಿ ನಿರತರಾಗಿರುವ ಫಾರ್ಮಸಿಸ್ಟ್‌ಗಳು ಹಾಗೂ ಔಷಧೀಯ ಸಿಬ್ಬಂದಿಯ ಸೇವೆಯನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.
ಫಾದರ್ ಮುಲ್ಲರ್ ಧರ್ಮಾರ್ಥ ಸಂಸ್ಥೆಗಳ ನಿರ್ದೇಶಕ ವಂ| ಫಾ| ಫೌಸ್ಟಿನ್ ಲೂಕಾಸ್ ಲೋಬೋ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಫಾರ್ಮಸಿ ವಿಭಾಗದ ಉಸ್ತುವಾರಿ ಸಿಷ್ಟರ್ ಮೇರಿ ಜೀನತ್ ಸುವಾರಿಸ್ ಸ್ವಾಗತಿಸಿದರು. "ಆರೋಗ್ಯಕರ ಭವಿಷ್ಯಕ್ಕಾಗಿ ಫಾರ್ಮಸಿಸ್ಟ್‌ಗಳ ಸಬಲೀಕರಣ" ಎಂಬ ಈ ವರ್ಷದ ಧ್ವೇಯವಾಕ್ಯವನ್ನು ಪ್ರಸ್ತಾಪಿಸಿದ ಅವರು, ಫಾರ್ಮಸಿಸ್ಟ್‌ಗಳ ಕರುಣೆ, ಜವಾಬ್ದಾರಿ ಹಾಗೂ ಮಾನವೀಯ ಸಂಬಂಧದ ಮಹತ್ವವನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಂ| ಫಾ| ಫೌಸ್ಟಿನ್ ಲೂಕಾಸ್ ಲೋಬೋ ಅವರು, ಆರೋಗ್ಯ ವ್ಯವಸ್ಥೆ ಮತ್ತು ರೋಗಿಯ ನಡುವಿನ ಕೊನೆಯ ಪ್ರಮುಖ ಕೊಂಡಿಯಾಗಿ ಫಾರ್ಮಸಿಸ್ಟ್‌ಗಳು ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದರು. ಔಷಧಗಳನ್ನು ವಿತರಿಸುವುದು ಕೇವಲ ವೃತ್ತಿಪರ ಜವಾಬ್ದಾರಿಯಷ್ಟೇ ಅಲ್ಲದೆ, ಆತಂಕದಲ್ಲಿರುವ ರೋಗಿಗಳೊಂದಿಗೆ ತೋರುವ ಅನುಕಂಪ, ನಿಖರತೆ ಮತ್ತು ಸೌಜನ್ಯಪೂರ್ಣ ನಡವಳಿಕೆ ಅತ್ಯಂತ ಮುಖ್ಯವಾಗಿದೆ. "ಗ್ರಾಹಕನೇ ಸಾರ್ವಭೌಮ, ನೀಡುವ ಔಷಧದ ಜವಾಬ್ದಾರಿ ವಿತರಿಸುವವನ ಮೇಲಿರುತ್ತದೆ" ಎಂದು ಅವರು ಪ್ರತಿಪಾದಿಸಿದರು. ಇದೇ ವೇಳೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಸಂಸ್ಥೆಯಲ್ಲಿ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಸಿಬ್ಬಂದಿಯಾದ ಜೂನಿಯರ್ ಫಾರ್ಮಸಿಸ್ಟ್ ಸಫಿಯಾ ತಲಚೇರಿ (8 ವರ್ಷ 6 ತಿಂಗಳ ಸೇವೆ), ಚೈತ್ರಾ (7 ವರ್ಷ), ಹಿರಿಯ ಗುಮಾಸ್ತೆ ವೀಣಾ ಲೋಬೋ (29 ವರ್ಷ 3 ತಿಂಗಳು), ಹಿರಿಯ ಫಾರ್ಮಸಿ ಸಹಾಯಕಿ ಮಮತಾ (18 ವರ್ಷ), ಫಾರ್ಮಸಿ ಸಹಾಯಕಿ ಜಾನಕಿ (17 ವರ್ಷ 10 ತಿಂಗಳು) ಹಾಗೂ ಹಿರಿಯ ಅಟೆಂಡರ್ ತಾರಾನಾಥ್ (13 ವರ್ಷ 4 ತಿಂಗಳು) ಅವರನ್ನು ನಿರ್ದೇಶಕರು ಸನ್ಮಾನಿಸಿದರು. ಜೊತೆಗೆ, ವೃತ್ತಿಜೀವನದ ಆಚೆಗೂ ಸಾಮಾಜಿಕ ಕಳಕಳಿ ಮೆರೆದು 27 ಬಾರಿ ರಕ್ತದಾನ ಮಾಡಿದ ಫಾರ್ಮಸಿಸ್ಟ್ ಶ್ರೇಯಸ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನವೀಕರಿಸಲಾದ ಹಾಗೂ ವಿಸ್ತರಿಸಲಾದ ಹೊಸ ಫಾರ್ಮಸಿ ಸೌಲಭ್ಯದ ಕುರಿತು ಮಾಹಿತಿ ನೀಡಲಾಯಿತು. "ಒಂದೇ ಸೂರಿನಡಿ ಎಲ್ಲ ಸೇವೆ" (One Roof, One Stop) ಪರಿಕಲ್ಪನೆಯಡಿಯಲ್ಲಿ ಒಳರೋಗಿಗಳು ಹಾಗೂ ಹೊರರೋಗಿಗಳಿಗೆ ಸುಲಭವಾಗಿ, ಕ್ಷಿಪ್ರವಾಗಿ ಮತ್ತು ಯಾವುದೇ ವಿಳಂಬವಿಲ್ಲದೆ ಔಷಧಗಳು ದೊರೆಯುವಂತೆ ಈ ನೂತನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಮಾರಂಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಫಾ| ಜಾರ್ಜ್ ಜೀವನ್ ಸಿಕ್ವೇರಾ, ಆಧ್ಯಾತ್ಮಿಕ ಮಾರ್ಗದರ್ಶಕರಾದ ವಂ| ಫಾ| ವಿಲಿಯಂ ಡಿಸೋಜಾ, ವಂ| ಫಾ| ಜಾನ್ ವಾಸ್, ವಂ| ಫಾ| ರೊನಾಲ್ಡ್ ಲೋಬೋ, ಹೆಚ್ಚುವರಿ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ| ಕಿಶನ್ ಶೆಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಔಷಧೀಯ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು. ಫಾರ್ಮಸಿ ಕಾರ್ಯಾಚರಣೆ ನಿರ್ವಾಹಕಿ ಸೊನಾಲಿ ರೊಡ್ರಿಗಸ್ ಧನ್ಯವಾದ ಅರ್ಪಿಸಿದರು.