ಮಂಗಳೂರು: ಬಹುಶ್ರುತ ವಿದ್ವಾಂಸ ಹಾಗೂ ಸಾರಸ್ವತ ಲೋಕದ ಅಚ್ಚಳಿಯದ ಮೇರು ವ್ಯಕ್ತಿತ್ವ ಪ್ರೊ. ಅಮೃತ ಸೋಮೇಶ್ವರ ಅವರ ಸ್ಮರಣಾರ್ಥ ಸೆಪ್ಟೆಂಬರ್ 27ರ ಭಾನುವಾರದಂದು ಮಂಗಳೂರಿನ ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಒಂದು ದಿನದ ರಾಜ್ಯಮಟ್ಟದ 'ಅಮೃತ ಮಂಥನ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸಂತ ಆಲೋಶಿಯಸ್ ವಿಶ್ವವಿದ್ಯಾಲಯ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಲಾಗಂಗೋತ್ರಿ, ರಂಗಸಂಗಾತಿ, ಬಹುರೂಪಿ ಫೌಂಡೇಷನ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಕೇಂದ್ರಗಳು ಸಹಕಾರ ನೀಡುತ್ತಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಧಾನ ಭಾಷಣ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಕಾಪಿಕಾಡ್ ಹಾಗೂ ಸಂತ ಆಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಅವರು ಅಮೃತ ನಮನ ಸಲ್ಲಿಸಲಿದ್ದಾರೆ. ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರೊ. ಅಮೃತ ಸೋಮೇಶ್ವರ ಅವರ ಕುಟುಂಬದ ಪರವಾಗಿ ಡಾ. ಚೇತನ ಸೋಮೇಶ್ವರ ಹಾಗೂ ಜೀವನ್ ಸೋಮೇಶ್ವರ ತಿಳಿಸಿದ್ದಾರೆ.
ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರೊ. ಅಮೃತರ ಕುರಿತ ವಿಚಾರ ಸಂಕಿರಣ ಆಯೋಜಿತಗೊಂಡಿದ್ದು, ಡಾ. ಸಾಯಿಗೀತಾ, ಸುನಿಲ್ ಪಲ್ಲಮಜಲು ಹಾಗೂ ಡಾ. ಕೆ. ಮಹಾಲಿಂಗ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಹೆಚ್. ಜಯಪ್ರಕಾಶ ಶೆಟ್ಟಿ ವಹಿಸಲಿದ್ದಾರೆ. ತದನಂತರ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಡಾ. ನಾ. ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ಡಾ. ನರೇಂದ್ರ ರೈ ದೇರ್ಲ ಮತ್ತು ಬೇ.ಸೀ. ಗೋಪಾಲಕೃಷ್ಣ ಅವರು ಪ್ರೊ. ಅಮೃತರ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.
ಸಂಸ್ಕೃತಿ ಹಾಗೂ ಸಾಹಿತ್ಯಿಕ ಚಿಂತನೆಗಳ ಜೊತೆಗೆ 'ಜರ್ನಿ ಥಿಯೇಟರ್' ತಂಡದ ಕಲಾವಿದರಿಂದ ಅಮೃತ ಸೋಮೇಶ್ವರ ಅವರು ರಚಿಸಿದ ತುಳು ಹಾಗೂ ಕನ್ನಡ ಭಾಷೆಗಳ ರಂಗ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರಾದ ಡಾ. ತಾಳ್ತಜೆ ವಸಂತಕುಮಾರ್ ವಹಿಸಲಿದ್ದು, ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ.