image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ವಿಶ್ವ ಶ್ರವಣ ದೋಷ ದಿನಾಚರಣೆ

ಮಂಗಳೂರಿನಲ್ಲಿ ವಿಶ್ವ ಶ್ರವಣ ದೋಷ ದಿನಾಚರಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರಿನ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆ, ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ವಿಭಾಗ ಹಾಗೂ ಜಿಲ್ಲಾ ಆರಂಭಿಕ ಹಸ್ತಕ್ಷೇಪ ಕೇಂದ್ರದ (DEIC) ಜಂಟಿ ಆಶ್ರಯದಲ್ಲಿ 'ವಿಶ್ವ ಶ್ರವಣ ದೋಷ ದಿನಾಚರಣೆ 2026' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವೆನ್‍ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರವಣ ದೋಷದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ವಿವರಿಸಿದರು. ಅಲ್ಲದೆ, ಆಸ್ಪತ್ರೆಯಲ್ಲಿ ಲಭ್ಯವಿರುವ ವಿವಿಧ ಆರೋಗ್ಯ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಿವಿ, ಮೂಗು ಮತ್ತು ಗಂಟಲು ತಜ್ಞೆ ಡಾ. ರತ್ನಾವತಿ ಶ್ರವಣದ ಮಹತ್ವದ ಕುರಿತು ಮಾಹಿತಿ ನೀಡಿ, ಮಕ್ಕಳಲ್ಲಿ ಶ್ರವಣ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವಂತೆ ತಿಳಿಸಿದರು. ಮಕ್ಕಳ ತಜ್ಞ ಡಾ. ಲಿಫಾಮ್ ಮಾತನಾಡಿ, ಆರಂಭಿಕ ಶ್ರವಣ ತಪಾಸಣೆಯಿಂದ (Early Hearing Screening) ಶ್ರವಣ ದೋಷವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ, ಶ್ರವಣ ಸಾಧನಗಳು, ವಾಕ್ ಮತ್ತು ಭಾಷಾ ಚಿಕಿತ್ಸೆ ಹಾಗೂ ಅಗತ್ಯ ಪುನರ್ವಸತಿ ಸೇವೆಗಳನ್ನು ಆರಂಭಿಸಬಹುದು ಎಂದು ವಿವರಿಸಿದರು. ಮತ್ತೊಬ್ಬ ಇಎನ್‌ಟಿ ತಜ್ಞ ಡಾ. ವಿಶ್ವವಿಜೇತ್ ಅವರು ಶ್ರವಣ ದೋಷ ಉಳ್ಳವರ ಮಾನವ ಹಕ್ಕುಗಳು ಹಾಗೂ ಈ ವರ್ಷದ ಧ್ಯೇಯವಾಕ್ಯದ ಕುರಿತು ಬೆಳಕು ಚೆಲ್ಲಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪುಟ್ಟರಾಜು, ಮೆಟ್ರಾನ್‌ಗಳಾದ ಟ್ರೇಸಿಯಮ್ಮ ಹಾಗೂ ಎಲಿಯಮ್ಮ, ಶ್ರವಣ ತಜ್ಞೆ ಮತ್ತು ವಾಕ್ ಚಿಕಿತ್ಸಕಿ ಅಮೀಷಾ, ಆಸ್ಪತ್ರೆಯ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಡಿ.ಇ.ಐ.ಸಿ ಸೈಕಾಲಜಿಸ್ಟ್ ರಶ್ಮಿ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ