ಉಜಿರೆ: ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮದುಮಗಳ ಶೃಂಗಾರ (Bridal Makeup) ತರಬೇತಿ ಬ್ಯಾಚ್‌ನ ಸಮಾರೋಪ ಸಮಾರಂಭವು ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಸ್ಕತು ಸಿನಿಮಾದ ನಾಯಕ ನಟ ಶ್ರೀ ದೀಕ್ಷಿತ್, ಕನಸಿಲ್ಲದವರಿಗೆ ದಾರಿಯಿರುವುದಿಲ್ಲ ಎಂದರು. ಎಲ್ಲರೂ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಹಾಗೂ ಕಲಿತ ಕೌಶಲ್ಯವನ್ನು ನಿರಂತರವಾಗಿ ಅಭ್ಯಾಸ ಮಾಡುವುದರ ಮೂಲಕ ಇನ್ನಷ್ಟು ನೈಪುಣ್ಯವನ್ನು ಗಳಿಸಬೇಕು ಎಂದು ಅವರು ಸಲಹೆ ನೀಡಿದರು. ಅಲ್ಲದೆ, ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಿ ಪ್ರಾಮಾಣಿಕತೆ ಮತ್ತು ಗುಣಮಟ್ಟದೊಂದಿಗೆ ಸೇವೆ ನೀಡಿದಾಗ ಉದ್ಯಮದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯವೆಂದು ತಿಳಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ. ವಿಜಯಕುಮಾರ್ ಮಾತನಾಡಿ, ತರಬೇತಿ ಪೂರ್ಣಗೊಂಡ ನಂತರವೂ ಕಲಿಕೆಯನ್ನು ನಿಲ್ಲಿಸಬಾರದೆಂದರು. ಮಾರುಕಟ್ಟೆಯ ಬದಲಾವಣೆಗಳಿಗೆ ತಕ್ಕಂತೆ ಹೊಸ ತಂತ್ರಜ್ಞಾನ ಹಾಗೂ ಶೈಲಿಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಸುನಿಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀಮತಿ ಶ್ವೇತಾ ಪ್ರಾರ್ಥನೆ ನಡೆಸಿಕೊಟ್ಟರೆ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಪಡೆದ ಶಿಬಿರಾರ್ಥಿಗಳಾದ ಶ್ರೀಮತಿ ಗೀತಾ ಪ್ರವೀಣ್ ಹಾಗೂ ಕುಮಾರಿ ಕೀರ್ತನಾ ತಮ್ಮ ಅನಿಸಿಕೆ ಮತ್ತು ಅನುಭವಗಳನ್ನು ಹಂಚಿಕೊಂಡರು. ಅಂತಿಮವಾಗಿ ಮತ್ತೊಬ್ಬ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ವಂದನಾರ್ಪಣೆಗೈದರು.