image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಜರುಗಿದ ಲಿಯೋರಾ: ಮೈ ಲೈಟ್ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ಜರುಗಿದ ಲಿಯೋರಾ: ಮೈ ಲೈಟ್ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಮಂಗಳೂರು: ಜೀವನ ಮತ್ತು ಭರವಸೆಯ ಸಂಕೇತವಾದ “ಲಿಯೋರಾ: ಮೈ ಲೈಟ್” ಎಂಬ ಆಶಯದೊಂದಿಗೆ ಶ್ರೀನಿವಾಸ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್‌ನಲ್ಲಿ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಸೆಪ್ಟೆಂಬರ್ 23, 2026ರಂದು ಯಶಸ್ವಿಯಾಗಿ ಆಚರಿಸಲಾಯಿತು. ಆತ್ಮಹತ್ಯೆ ತಡೆಗಟ್ಟುವಿಕೆ, ಮಾನಸಿಕ ಆರೋಗ್ಯ, ಭಾವನಾತ್ಮಕ ಬೆಂಬಲ ಹಾಗೂ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರಿಗೆ ಸಮಯೋಚಿತವಾಗಿ ನೆರವು ನೀಡುವ ಮಹತ್ವದ ಕುರಿತು ಕಾರ್ಯಕ್ರಮದಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಅವರು ಮಾತನಾಡಿ, ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಮಾಲೋಚನೆಯು ಪರಿಣಾಮಕಾರಿ ಬೆಂಬಲ ನೀಡುತ್ತದೆ ಎಂದು ಒತ್ತಿಹೇಳಿದರು. ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ಪ್ರೊ. ಇಆರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್ ಅವರು ಇಂದಿನ ದಿನಗಳಲ್ಲಿ ಮತ್ತೊಬ್ಬರಿಗೆ ಸಮಯ ನೀಡುವುದು ಮತ್ತು ತಾಳ್ಮೆಯಿಂದ ಆಲಿಸುವುದು ಅಮೂಲ್ಯವಾದ ದಾನವಾಗಿದೆ ಎಂದರು. ಮತ್ತೊಬ್ಬ ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಅವರು ಯುವಜನರು ಸವಾಲುಗಳನ್ನು ಎದುರಿಸಿ, ಅಗತ್ಯವಿದ್ದಾಗ ಸಹಾಯ ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಹಾಗೆಯೇ, ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ಸಮನಾ ರಾವ್ ಅವರು ವಿದ್ಯಾರ್ಥಿಗಳ ಸಮಗ್ರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಶ್ವವಿದ್ಯಾಲಯದ 'ವೆಲ್‌ನೆಸ್ ಸೆಂಟರ್' ಕಾರ್ಯವೈಖರಿಯನ್ನು ವಿವರಿಸಿದರು.

ಮುಖ್ಯ ಅತಿಥಿಯಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶ್ರೀ ರಾಘವೇಂದ್ರ ಭಾಗವಹಿಸಿ, ಆರ್ಥಿಕ ಸಮಸ್ಯೆಗಳು ಹಾಗೂ ವಿಶ್ವಾಸಾರ್ಹವಲ್ಲದ ಡಿಜಿಟಲ್ ಸಾಲ ಆ್ಯಪ್‌ಗಳ ಕುರಿತು ಎಚ್ಚರಿಕೆ ನೀಡಿದರು. ಯಾವುದೇ ಕಷ್ಟ ಬಂದರೂ ಹಾನಿಕರ ನಿರ್ಧಾರ ಕೈಗೊಳ್ಳದೆ ಪೊಲೀಸ್ ಇಲಾಖೆ ಅಥವಾ ತಜ್ಞರನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ SIMS&RCಯ ಮನೋವೈದ್ಯಕೀಯ ವಿಭಾಗದ ಪ್ರೊ. ಡಾ. ಮಿಥುನ್ ಎಸ್., ಭಾವನಾತ್ಮಕ ಸಂಕಷ್ಟದಲ್ಲಿರುವವರು ಒಂಟಿಯಲ್ಲ ಎಂಬುದನ್ನು ಮನಗಾಣಿಸಿ, ಪರಸ್ಪರ ನೆರವಿನ ಹಸ್ತ ಚಾಚುವಂತೆ ತಿಳಿಸಿದರು.

ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ರೀಲ್ಸ್ ಮೇಕಿಂಗ್ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸೃಜನಶೀಲತೆಯ ಮೂಲಕ ಮಾನಸಿಕ ಆರೋಗ್ಯದ ಸಂದೇಶ ಸಾರಲಾಯಿತು. ಉಪಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಅಭಿವೃದ್ಧಿ ರಿಜಿಸ್ಟ್ರಾರ್‌ ಡಾ. ಅಜಯ್‌ ಕುಮಾರ್‌ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮನೋವಿಜ್ಞಾನ ವಿಭಾಗದ ಮಹಿಮಾ ಸಾಜಿ ಸ್ವಾಗತಿಸಿ, ರಚನಾ ರಿತು ನಿರೂಪಿಸಿ, ಸುಲ್ತಾನಾ ರಾಜ್ ವಂದನಾರ್ಪಣೆಗೈದರು.

Category
ಕರಾವಳಿ ತರಂಗಿಣಿ