ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪೋಷಕರ ಸಭೆಯು ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳ ಪ್ರಸ್ತುತ ಶೈಕ್ಷಣಿಕ ಪ್ರಗತಿ, ತರಗತಿಯ ಕಲಿಕೆಯ ಸ್ಥಿತಿ ಮತ್ತು ವಿಷಯವಾರು ಸಾಧನೆಯ ಕುರಿತು ಚರ್ಚಿಸಲಾಯಿತು.
ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವುದು, ಅಂದಿನ ಪಾಠಗಳನ್ನು ಅಂದೇ ಪುನರಾವರ್ತಿಸುವುದು ಮತ್ತು ಸಂದೇಹಗಳನ್ನು ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುವುದು ಅತ್ಯಾವಶ್ಯಕವೆಂದು ತಿಳಿಸಲಾಯಿತು. ಶೈಕ್ಷಣಿಕ ಬೆಳವಣಿಗೆಯ ಜತೆಗೆ ಸಮಯಪಾಲನೆ, ಶಿಸ್ತು, ವ್ಯಕ್ತಿತ್ವ ವಿಕಸನ ಮತ್ತು ಉತ್ತಮ ಅಭ್ಯಾಸಗಳ ಬಗ್ಗೆಯೂ ಪೋಷಕರಿಗೆ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳ ಅಧ್ಯಯನದ ಮೇಲೆ ನಿರಂತರ ನಿಗಾ ವಹಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಲಾಯಿತು.
ಈ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ., ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಉಪಸ್ಥಿತರಿದ್ದರು.