image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಅದ್ಧೂರಿಯಾಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ

ಮಂಗಳೂರಿನಲ್ಲಿ ಅದ್ಧೂರಿಯಾಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಚಾಲನೆ

ಮಂಗಳೂರು: ಕರಾವಳಿಯ ಕ್ರೀಡಾಪ್ರೇಮಿಗಳ ದೀರ್ಘಕಾಲದ ನಿರೀಕ್ಷೆಯಂತೆ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ನಗರದ ಐತಿಹಾಸಿಕ ಮಂಗಳಾ ಕ್ರೀಡಾಂಗಣದಲ್ಲಿ ಬುಧವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಸರಾ ಕ್ರೀಡಾಕೂಟವು ಜಿಲ್ಲೆಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ಸಿಕ್ಕಿರುವ ಅತ್ಯುತ್ತಮ ವೇದಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಈ ಕ್ರೀಡಾಕೂಟದ ಮೂಲಕ ರಾಜ್ಯಮಟ್ಟದವರೆಗೆ ಮುನ್ನಡೆಯಲು ಅತ್ಯಮೂಲ್ಯ ಅವಕಾಶ ದೊರೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ಯುವಜನರನ್ನು ಪ್ರೋತ್ಸಾಹಿಸಲು ಹಾಗೂ ಅವರ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ಸೂಕ್ತ ಉತ್ತೇಜನ ನೀಡಲು 'ಭಾರತ್ ಜೋಡೋ ಯುವ ಸಂಘ'ಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ಪ್ರತೀ ಸಂಘಕ್ಕೂ ವಾರ್ಷಿಕ 10 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಲಭಿಸಲಿದೆ ಎಂದು ಪ್ರಮುಖ ಘೋಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಗಳಾ ಕ್ರೀಡಾಂಗಣದ ಸರ್ವಾಂಗೀಣ ಅಭಿವೃದ್ಧಿಗೆ ಬರೋಬ್ಬರಿ 20 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ. ಈ ಅನುದಾನದಿಂದ ಕ್ರೀಡಾಂಗಣದ ಮೂಲಭೂತ ಸೌಲಭ್ಯಗಳನ್ನು ಅತ್ಯುನ್ನತ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ಹಾಗೂ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಶಾಹಿದ್ ತೆಕ್ಕಿಲ್, ನೆಹರೂ ಯುವ ಕೇಂದ್ರದ ಉಪನಿರ್ದೇಶಕ ಉಲ್ಲಾಸ್ ಕೆ.ಟಿ. ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಕ ಮಮಚ್ಚನ್ ವಂದನಾರ್ಪಣೆಗೈದರೆ, ಖ್ಯಾತ ನಿರೂಪಕ ಮೋಹನ್ ಶಿರ್ಲಾಲ್ ಕಾರ್ಯಕ್ರಮವನ್ನು ಅತ್ಯಂತ ಆಕರ್ಷಕವಾಗಿ ನಿರೂಪಿಸಿದರು.

ಇಂದಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಒಟ್ಟು 20 ವಿವಿಧ ಕ್ರೀಡಾ ಸ್ಪರ್ಧೆಗಳು ಅತ್ಯಂತ ಉತ್ಸಾಹದಿಂದ ಜರುಗಿದವು. ಈ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗುವ ಪ್ರತಿಭಾವಂತ ಕ್ರೀಡಾಪಟುಗಳು ಮುಂದಿನ ಹಂತದಲ್ಲಿ ಮೈಸೂರು ವಿಭಾಗ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿಲಿದ್ದಾರೆ.

Category
ಕರಾವಳಿ ತರಂಗಿಣಿ