ಮಂಗಳೂರು: ವಿಶ್ವಕರ್ಮ ಸಮಾಜದವರ ಕಲಾ ನೈಪುಣ್ಯತೆಯು ಇಡೀ ವಿಶ್ವಕ್ಕೇ ಮಾನ್ಯವಾದುದಾಗಿದೆ. ಅವರಿಗೆ ಪಂಚಕಸುಬುಗಳಲ್ಲಿ ಯಾವುದೇ ಜವಾಬ್ದಾರಿ ಅಥವಾ ಕೆಲಸವನ್ನು ನೀಡಿದರೂ, ಅದಕ್ಕೆ ಅತ್ಯಂತ ಸುಂದರವಾದ ರೂಪವನ್ನು ನೀಡುವುದು ಅವರ ರಕ್ತಗತವಾಗಿ ಬಂದ ವಿಶೇಷ ಕಲೆಯಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪ್ರತಿಷ್ಠಿತ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶ್ರೀ ಕಾಳಿಕಾಂಬಾ ಕಲಾರಂಗ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಸಹಯೋಗದೊಂದಿಗೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದ್ದ 'ಶ್ರೀ ವಿಶ್ವಕರ್ಮ ಜಯಂತಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಮಾಜಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಖ್ಯಾತ ಲೇಖಕ ಉದಯಭಾಸ್ಕರ್ ಆಚಾರ್ಯ ಸುಳ್ಯ ಅವರು ಭಗವಾನ್ ಶ್ರೀ ವಿಶ್ವಕರ್ಮ ದೇವರ ಕುರಿತು ಹಾಗೂ ವಿಶ್ವಬ್ರಾಹ್ಮಣ ಸಮಾಜದ ಶ್ರೀಮಂತ ಪರಂಪರೆ ಮತ್ತು ಇತಿಹಾಸದ ಕುರಿತು ವಿಶೇಷ ಉಪನ್ಯಾಸ ನೀಡಿ ನೆರೆದಿದ್ದವರಿಗೆ ಮಾಹಿತಿ ಒದಗಿಸಿದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಹಾಗೂ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ. ಉಮೇಶ್ ಆಚಾರ್ಯ ಪಾಂಡೇಶ್ವರ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಅವರು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಚೇತನ್ ಕುಮಾರ್ ಮತ್ತು ಅಖಿಲೇಶ್ ಶರ್ಮಾ ಅವರು ವೇದಮಂತ್ರ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿ. ರವೀಂದ್ರ ಮಂಗಳಾದೇವಿ ಕಾರ್ಯಕ್ರಮವನ್ನು ಅತ್ಯಂತ ಸುಂದರವಾಗಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮುಕ್ತಾಯದ ಬಳಿಕ ವಿಶ್ವಬ್ರಾಹ್ಮಣ ಮಹಿಳಾ ಸಮಿತಿಯ ವತಿಯಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.