ಉಜಿರೆ: ಕಲಿತ ಕೌಶಲ್ಯಗಳನ್ನು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಹೆಚ್ಚಿನ ನೈಪುಣ್ಯತೆ ಗಳಿಸಬೇಕು. ಗ್ರಾಹಕರ ತೃಪ್ತಿಗೆ ಆದ್ಯತೆ ನೀಡಿ, ಪ್ರಾಮಾಣಿಕತೆ ಹಾಗೂ ಗುಣಮಟ್ಟದ ಸೇವೆ ನೀಡಿದಾಗ ಉದ್ಯಮದಲ್ಲಿ ಯಶಸ್ಸು ಹಾಗೂ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದು 'ದಸ್ಕತು' ಚಿತ್ರದ ನಾಯಕ ನಟ ದೀಕ್ಷಿತ್ ಹೇಳಿದರು.
ಅವರು ಇಲ್ಲಿನ ಸಿದ್ಧವನದ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 'ಮದುಮಗಳ ಶೃಂಗಾರ' (Bridal Makeup) ತರಬೇತಿ ಬ್ಯಾಚ್‌ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಕನಸಿಲ್ಲದವರಿಗೆ ದಾರಿ ಇರುವುದಿಲ್ಲ; ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಕನಸು ಕಾಣಬೇಕು. ತರಬೇತಿ ನೀಡಿದ ಸಂಸ್ಥೆಯನ್ನು ಎಂದಿಗೂ ಮರೆಯದೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮಾತನಾಡಿ, ತರಬೇತಿ ಪೂರ್ಣಗೊಂಡ ನಂತರವೂ ಕಲಿಕೆಯನ್ನು ನಿಲ್ಲಿಸಬಾರದು. ಮಾರುಕಟ್ಟೆಯ ಬದಲಾವಣೆಗಳಿಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಹಾಗೂ ಶೈಲಿಗಳನ್ನು ಮೈಗೂಡಿಸಿಕೊಳ್ಳಬೇಕು. ಕೌಶಲ್ಯ, ಗುಣಮಟ್ಟ, ಶಿಸ್ತು ಮತ್ತು ಗ್ರಾಹಕರ ವಿಶ್ವಾಸವನ್ನು ಆಧಾರವಾಗಿಟ್ಟುಕೊಂಡು ಉದ್ಯಮವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ನಿರ್ದೇಶಕ ಸುನಿಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳಾದ ಶ್ರೀಮತಿ ಗೀತಾ ಪ್ರವೀಣ್ ಮತ್ತು ಕುಮಾರಿ ಕೀರ್ತನಾ ತಮ್ಮ ತರಬೇತಿಯ ಅನುಭವಗಳನ್ನು ಹಂಚಿಕೊಂಡರು. ಶ್ರೀಮತಿ ಶ್ವೇತಾ ಪ್ರಾರ್ಥನೆ ನಡೆಸಿಕೊಟ್ಟರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರೆ, ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದನಾರ್ಪಣೆ ಸಲ್ಲಿಸಿದರು.