ಮೂಡುಬಿದಿರೆ : ಮೂಡುಬಿದಿರೆ ಸಮೀಪದ ಮಿಜಾರಿನ ಶ್ರೀಮತಿ ಶೋಭಾ ಮೋಹನ ಆಳ್ವ ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ ‘ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್’ (ಆಳ್ವಾಸ್ ಮೆಡಿಕಲ್ ಕಾಲೇಜು) ಸೋಮವಾರ ಅತ್ಯಂತ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು. ಆವರಣದ ಮಿಜಾರುಗುತ್ತು ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಲೇಜನ್ನು ಉದ್ಘಾಟಿಸಿ, ಇನ್ನೊಂದು ತಿಂಗಳಿನೊಳಗೆ ಆಳ್ವಾಸ್ ಸಂಸ್ಥೆಗೆ 'ಪರಿಗಣಿತ ವಿಶ್ವವಿದ್ಯಾಲಯ' (Deemed University) ಮಾನ್ಯತೆ ದೊರೆಯಲಿದೆ ಎಂಬ ಭರವಸೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಮುಂಬೈ ಕರ್ನಾಟಕದ ಜನರು ಧಾರ್ಮಿಕ ಶ್ರದ್ಧೆಗೆ ಧರ್ಮಸ್ಥಳಕ್ಕೆ ಮತ್ತು ಶಿಕ್ಷಣಕ್ಕೆ ಮೂಡುಬಿದಿರೆ ಆಳ್ವಾಸ್ ಸಂಸ್ಥೆಗೆ ಆಗಮಿಸುತ್ತಾರೆ ಎಂದು ಸ್ಮರಿಸಿದರು. 'ನೂರು ಕೈಯಿಂದ ಗಳಿಸಿ, ಸಾವಿರ ಕೈಗಳಿಂದ ಕೊಡಬೇಕು' ಎಂಬ ಭಾರತೀಯ ಸಂಸ್ಕೃತಿಯ ತತ್ತ್ವಕ್ಕೆ ಡಾ. ಎಂ. ಮೋಹನ ಆಳ್ವರ ಸಾಧನೆ ಹಾಗೂ ಅಶಕ್ತರಿಗೆ ನೆರವಾಗುವ ಅವರ ಸಂಸ್ಥೆಯ ಸಾಮಾಜಿಕ ಕಳಕಳಿಯೇ ಅತ್ಯುತ್ತಮ ನಿದರ್ಶನ ಎಂದರು. ಪ್ರಸ್ತುತ ಜಗತ್ತು ವೃದ್ಧಾಪ್ಯದತ್ತ ಸಾಗುತ್ತಿದ್ದರೆ, ಭಾರತವು ಯುವಜನರ ಶಕ್ತಿಯಿಂದ ಕಂಗೊಳಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ವೈದ್ಯರು ಮತ್ತು ಶುಶ್ರೂಷಕರ ಮೇಲಿನ ವಿಶ್ವಾಸ ಹೆಚ್ಚುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಜಗತ್ತಿನ ವೈದ್ಯಕೀಯ ಕೇಂದ್ರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು. ವೈದ್ಯಕೀಯ ಸಂಶೋಧನೆಯಲ್ಲಿ ಮಾನವೀಯತೆ ಅತ್ಯಗತ್ಯ ಎಂದ ಅವರು, ಮಕ್ಕಳ ಮೇಲೆ ಅನಗತ್ಯ ಶೈಕ್ಷಣಿಕ ಒತ್ತಡ ಹೇರಬೇಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ದೇಶದ ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಯನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದ ಸಚಿವರು, ಭಾರತವು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, 863 ಬಿಲಿಯನ್ ಡಾಲರ್ ರಫ್ತು, 300 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಶೇಕಡಾ 98ರಷ್ಟು ಮೊಬೈಲ್ ಫೋನ್‌ಗಳ ಸ್ಥಳೀಯ ಉತ್ಪಾದನೆಯ ಸಾಧನೆ ಮಾಡಿದೆ. ಮುಂಬರುವ ದಿನಗಳಲ್ಲಿ ಭಾರತವೇ 6ಜಿ ತಂತ್ರಜ್ಞಾನವನ್ನು ಜಗತ್ತಿಗೆ ನೀಡಲಿದೆ ಎಂದರು. ಪ್ರಸ್ತುತ ದೇಶದಲ್ಲಿ 1.4 ಲಕ್ಷ ವೈದ್ಯಕೀಯ ಸೀಟುಗಳು, 1.03 ಲಕ್ಷ ಪೇಟೆಂಟ್‌ಗಳು ಮತ್ತು 2.3 ಲಕ್ಷ ಸ್ಟಾರ್ಟ್‌ಅಪ್‌ಗಳು ಕಾರ್ಯಾಚರಿಸುತ್ತಿದ್ದು, ಕೇಂದ್ರ ಸರ್ಕಾರವು ಸಂಶೋಧನೆಗಾಗಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿದೆ. 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣವಾಗಲಿದ್ದು, ವೈದ್ಯಕೀಯ ಕ್ಷೇತ್ರದಿಂದ ಹೆಚ್ಚಿನ ನಾವೀನ್ಯಪೂರ್ಣ ಸ್ಟಾರ್ಟ್‌ಅಪ್‌ಗಳು ದಕ್ಷಿಣ ಕನ್ನಡ ಮತ್ತು ಕರ್ನಾಟಕದಿಂದ ಬರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಆಳ್ವಾಸ್ ಮೆಡಿಕಲ್ ಕಾಲೇಜಿನ ಸ್ಥಾಪನೆಯಿಂದ ಶಿಕ್ಷಣ ಪ್ರೇಮಿಗಳ ಬೇಡಿಕೆ, ಡಾ. ಆಳ್ವರ ಕನಸು ಮತ್ತು ಜನರ ಅಪೇಕ್ಷೆ ಈಡೇರಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಮತ್ತು ಅಧ್ಯಾತ್ಮಿಕ ಗುಣಮುಖ ರಾಜಧಾನಿಯಾಗಬೇಕು ಹಾಗೂ ವೈದ್ಯಕೀಯ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು. ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ ಹಾಗೂ ಸುಲಭವಾಗಿ ದೊರೆಯುವ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದ್ದು, ಈ ನೀತಿಯಿಂದಾಗಿ ದೇಶದಲ್ಲಿ ಆರೋಗ್ಯ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು. ಇದೇ ವೇಳೆ ಸಾರ್ವಜನಿಕರು ‘ಕ್ಷಯ ಮುಕ್ತ ಭಾರತ ಅಭಿಯಾನ’ಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಮಾತನಾಡಿ, ಆಳ್ವಾಸ್ ಸಂಸ್ಥೆಯು ತಮ್ಮ ವಿಶ್ವವಿದ್ಯಾಲಯದ ಭಾಗವಾಗಿರುವುದು ಹೆಮ್ಮೆಯ ವಿಷಯ. ಶಿಕ್ಷಣವು ಮಿದುಳಿಗೆ ಮಾತ್ರವಲ್ಲದೆ ಹೃದಯಕ್ಕೂ ತಲುಪಬೇಕು ಎಂಬ ಸಾಕ್ರೆಟಿಸ್ ಅವರ ಚಿಂತನೆಗೆ ಡಾ. ಮೋಹನ ಆಳ್ವರ ಮಾದರಿ ಅತ್ಯುತ್ತಮ ಉದಾಹರಣೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ವೈದ್ಯರು ಮತ್ತು ವೈದ್ಯಕೀಯ ದಿಗ್ಗಜರ ಸ್ಮರಣಾರ್ಥವಾಗಿ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ಪ್ರಕಟಿಸಿದರು.
ಈ ಶುಭ ಸಮಾರಂಭದಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಹೆ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಂಗಳೂರು ವಿ.ವಿ. ಕುಲಪತಿ ಡಾ. ಪಿ.ಎಲ್. ಧರ್ಮ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ವಿವಿಧ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳು, ಜನಪ್ರತಿನಿಧಿಗಳು, ವೈದ್ಯಕೀಯ ರಂಗದ ಪ್ರಮುಖರು ಹಾಗೂ ಆಳ್ವಾಸ್ ಸಂಸ್ಥೆಯ ಟ್ರಸ್ಟಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.