image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಹೀನ್ ಕಾಲೇಜು ವಿದ್ಯಾರ್ಥಿನಿ ಕೋಮಾ ಸ್ಥಿತಿಗೆ: ಸಮಗ್ರ ತನಿಖೆಗೆ ಪೋಷಕರ ಆಗ್ರಹ

ಶಾಹೀನ್ ಕಾಲೇಜು ವಿದ್ಯಾರ್ಥಿನಿ ಕೋಮಾ ಸ್ಥಿತಿಗೆ: ಸಮಗ್ರ ತನಿಖೆಗೆ ಪೋಷಕರ ಆಗ್ರಹ

ಮಂಗಳೂರು: ಬೀದರ್‌ನ ಶಾಹೀನ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್‌ನಲ್ಲಿ ಅಸ್ವಸ್ಥಗೊಂಡು, ಪ್ರಸ್ತುತ ಮಂಗಳೂರಿನ ಕೆಎಂಸಿ (KMC) ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆಯ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಕೆಯ ತಂದೆ ಅಶ್ಫಾಕ್ ಮತ್ತು ಕುಟುಂಬಸ್ಥರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ. ನೀಡಿರುವ ಮಾಹಿತಿಯಂತೆ, ವಿದ್ಯಾರ್ಥಿನಿಗೆ ಹಾಸ್ಟೆಲ್‌ನಲ್ಲಿ ತೀವ್ರ ಹೊಟ್ಟೆ ನೋವು ಹಾಗೂ ಅನಾರೋಗ್ಯ ಕಾಣಿಸಿಕೊಂಡಾಗ ಆಕೆಯನ್ನು ಮೊದಲು ಹಾಸ್ಟೆಲ್‌ನ ನರ್ಸಿಂಗ್ ಘಟಕಕ್ಕೆ ಕರೆದೊಯ್ಯಲಾಗಿತ್ತು. ಆದರೆ ಆಕೆಯ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಾಗ ಸೂಕ್ತ ಸಮಯದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಲು ಹಾಗೂ ಆಸ್ಪತ್ರೆಗೆ ಸ್ಥಳಾಂತರಿಸಲು ವಿಳಂಬ ಮಾಡಲಾಗಿದೆ ಎಂದು ಆರೋಪಿಸಿದರು. ಪ್ರಸ್ತುತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದ್ದು, ನೀಡಲಾಗುತ್ತಿರುವ ಔಷಧಿಗೆ ವೈದ್ಯರು ನಿರೀಕ್ಷಿಸಿದ ರೀತಿಯಲ್ಲಿ ಸ್ಪಂದಿಸದ ಕಾರಣ ಸ್ಥಿತಿ ಚಿಂತಾಜನಕವಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆಗೆ ಈಗಾಗಲೇ 35 ಲಕ್ಷ ರೂಪಾಯಿಗೂ ಅಧಿಕ ವೆಚ್ಚವಾಗಿದ್ದು, ಕುಟುಂಬವು ತೀವ್ರ ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವಿದ್ಯಾರ್ಥಿನಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ, ಶಾಹೀನ್ ಸಂಸ್ಥೆಯ ಆಡಳಿತ ಮಂಡಳಿಯಾಗಲಿ ಅಥವಾ ಕಾಲೇಜಿನ ಸಿಬ್ಬಂದಿಯಾಗಲಿ ಕುಟುಂಬವನ್ನು ಸಂಪರ್ಕಿಸಿ ವಿಚಾರಿಸಿಲ್ಲ ಹಾಗೂ ಕನಿಷ್ಠ ಮಾನವೀಯ ಕಾಳಜಿ ಅಥವಾ ಜವಾಬ್ದಾರಿಯನ್ನೂ ತೋರಿಸಿಲ್ಲ ಎಂದು ಪೋಷಕರು ತೀವ್ರ ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಗೆ ಅನಾರೋಗ್ಯ ಕಾಣಿಸಿಕೊಂಡ ಕ್ಷಣದಿಂದ ಆಸ್ಪತ್ರೆಗೆ ದಾಖಲಿಸುವವರೆಗಿನ ಸಂಪೂರ್ಣ ಘಟನಾವಳಿಯ ಕುರಿತು ಸ್ವತಂತ್ರ ತನಿಖೆಯಾಗಬೇಕು. ಹಾಸ್ಟೆಲ್‌ನಲ್ಲಿ ನೀಡಲಾದ ಪ್ರಾಥಮಿಕ ಚಿಕಿತ್ಸೆ, ನರ್ಸಿಂಗ್ ದಾಖಲೆಗಳು, ಸಿಬ್ಬಂದಿಯ ಹೇಳಿಕೆಗಳು ಹಾಗೂ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ತನಿಖೆಯಲ್ಲಿ ಯಾವುದೇ ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಯ ಜೀವ ಉಳಿಸಲು ಮತ್ತು ಭಾರಿ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯ ದೃಷ್ಟಿಕೋನದಿಂದ ಸಂಪೂರ್ಣ ಸಹಕಾರ ಹಾಗೂ ನೆರವು ನೀಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಬಾಲಕಿಯ ಕುಟುಂಬಸ್ತರಾದ ಸಯ್ಯದ್ ಶಾರಿಕ್, ಅನ್ಸಾರ್ ಅಲಿ, ಮತ್ತು ಶೌಕತ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ