ಧರ್ಮಸ್ಥಳ: ಕುಮಾರಿ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಮುಕ್ತಮನಸ್ಸಿನಿಂದ ಸ್ವಾಗತಿಸಲಾಗಿದೆ. ಈ ಕುರಿತು ಧರ್ಮಸ್ಥಳ ದೇವಾಲಯ ಕಚೇರಿಯ ವ್ಯವಸ್ಥಾಪಕ ಕೆ. ಪಾರ್ಶ್ವನಾಥ ಜೈನ್ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀ ಕ್ಷೇತ್ರದ ಮೇಲೆ ವ್ಯವಸ್ಥಿತವಾಗಿ ಹಾಗೂ ನಿರಂತರವಾಗಿ ಅಪಪ್ರಚಾರ ನಡೆಸಿ, ಕಳಂಕ ತರುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕುಮಾರಿ ಸೌಜನ್ಯಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯವಾಗಿದೆ. ಪ್ರಸ್ತುತ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣವಾಗಿ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಯಲಿ ಮತ್ತು ಈ ಮೂಲಕ ಪ್ರಕರಣಕ್ಕೆ ಸೂಕ್ತ ತಾರ್ಕಿಕ ಅಂತ್ಯ ದೊರೆಯಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳವು ಆಶಿಸಿದೆ ಎಂದು ಪ್ರಕಟಣೆಯಲ್ಲಿ ವ್ಯಕ್ತಪಡಿಸಲಾಗಿದೆ.