ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಮುಂದಿನ ಒಂದು ತಿಂಗಳೊಳಗೆ 'ಡೀಮ್ಡ್ ವಿಶ್ವವಿದ್ಯಾಲಯ' (Deemed University) ಮಾನ್ಯತೆಯ 'ಲೆಟರ್ ಆಫ್ ಇಂಟೆಂಟ್' (LOI) ನೀಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರಾದ ಪ್ರಹ್ಲಾದ್ ಜೋಷಿ ಭರವಸೆ ನೀಡಿದ್ದಾರೆ.
ಮೂಡಬಿದಿರೆಯಲ್ಲಿ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಸಂಸ್ಥೆಯ ಡೀಮ್ಡ್ ಯೂನಿವರ್ಸಿಟಿ ಪ್ರಸ್ತಾವನೆಗೆ ಸಂಬಂಧಿಸಿದಂತೆ 10 ರಿಂದ 12 ಅಂಶಗಳ ಸ್ಪಷ್ಟೀಕರಣವನ್ನು ಈಗಾಗಲೇ ಇಮೇಲ್ ಮೂಲಕ ಕಳುಹಿಸಲಾಗಿದೆ. ಸಂಸ್ಥೆಯು ಒಂದೆರಡು ದಿನಗಳಲ್ಲಿ ಅದಕ್ಕೆ ಸೂಕ್ತ ಸ್ಪಷ್ಟೀಕರಣ ನೀಡಿದರೆ, ಮುಂದಿನ ಒಂದು ತಿಂಗಳೊಳಗೆ ಲೆಟರ್ ಆಫ್ ಇಂಟೆಂಟ್ ನೀಡಲಾಗುವುದು. ಈ ಮೂಲಕ ಆಳ್ವಾಸ್‌ನ ಎಲ್ಲಾ ಸಂಸ್ಥೆಗಳನ್ನು ಒಂದೇ ವಿಶ್ವವಿದ್ಯಾಲಯದ ಅಡಿಯಲ್ಲಿ ತಂದು ಜಗತ್ತಿನಲ್ಲೇ ಅತ್ಯುತ್ತಮ ಸಂಸ್ಥೆಯನ್ನಾಗಿ ರೂಪಿಸಲು ಬೆಂಬಲ ನೀಡಲಾಗುವುದು ಎಂದರು.
ಡಾ. ಮೋಹನ್ ಆಳ್ವಾ ಅವರ ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಚಿವರು, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರ ಹಾಗೂ ಬಡ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯ ಕಾರ್ಯ ಮಾದರಿಯಾಗಿದೆ. ವೈದ್ಯಕೀಯ ಸಂಶೋಧನೆ ಮತ್ತು ಆಸ್ಪತ್ರೆ ಮೂಲಕ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯು ಜಗತ್ತಿನ 'ಮೆಡಿಕಲ್ ಹಬ್' (Medical Hub) ಆಗುವ ಸಂಪೂರ್ಣ ಅರ್ಹತೆ ಹೊಂದಿದೆ. ದೇಶದಲ್ಲಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 380 ರಿಂದ 700 ಕ್ಕೂ ಅಧಿಕಗೊಂಡಿದ್ದು, ವೈದ್ಯಕೀಯ ಸೀಟುಗಳ ಸಂಖ್ಯೆ 51 ಸಾವಿರದಿಂದ 1.40 ಲಕ್ಷಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಭಾರತೀಯ ವೈದ್ಯರು ಮತ್ತು ಶುಶ್ರೂಷಕರಿಗೆ ಅಪಾರ ಬೇಡಿಕೆ ಇದ್ದು, ಭಾರತವನ್ನು ಜಾಗತಿಕ ವೈದ್ಯಕೀಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದರು.
21ನೇ ಶತಮಾನವು ಭಾರತದ ಶತಮಾನವಾಗಿದ್ದು, ದೇಶವು 7.8% ದರದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ 2.30 ಲಕ್ಷಕ್ಕೇರಿದ್ದು, ಪೇಟೆಂಟ್‌ಗಳ ಸಂಖ್ಯೆ 1 ಲಕ್ಷ ದಾಟಿದೆ. ಸಂಶೋಧನೆ ಮತ್ತು ಅಭಿವೃದ್ಧಿ (R&D) ಬಜೆಟ್ ಅನ್ನು 2.5 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಯುವಜನರಲ್ಲಿ ಕೌಶಲ ಹಾಗೂ ಧೈರ್ಯ ತುಂಬುವುದರ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಅತ್ಯಗತ್ಯ ಎಂದು ಸಚಿವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ, ವಿಮ ಕುಲಪತಿ ಶ್ರೀ ಭಗವಾನ್, ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ್ ಕೋಟ್ಯಾನ್, ಪ್ರಕಾಶ್ ಶೆಟ್ಟಿ, ತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.