image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ 100 ವಾರಗಳ 'ನಶಾ ಮುಕ್ತ ಯುವ ಅಭಿಯಾನ'ಕ್ಕೆ ಚಾಲನೆ

ಮಂಗಳೂರಿನಲ್ಲಿ 100 ವಾರಗಳ 'ನಶಾ ಮುಕ್ತ ಯುವ ಅಭಿಯಾನ'ಕ್ಕೆ ಚಾಲನೆ

ಮಂಗಳೂರು: ಯುವಜನತೆಯನ್ನು ಮಾದಕ ದ್ರವ್ಯ ಮುಕ್ತಗೊಳಿಸಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ‘ಮೈ ಭಾರತ್’ (ದಕ್ಷಿಣ ಕನ್ನಡ), ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಎನ್‍ಎಸ್‍ಎಸ್ ಘಟಕ ಹಾಗೂ ಮಹಿಳಾ ಕೋಶದ ಜಂಟಿ ಸಹಯೋಗದೊಂದಿಗೆ "ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ - ರಾಷ್ಟ್ರೀಯ ಸಂಕಲ್ಪ ಸಮಾರೋಹ"ವನ್ನು ಸೇಂಟ್ ಆಗ್ನೆಸ್ ಕನ್ವೆನ್ಷನ್ ಹಾಲ್‍ನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮೂಲಕ 100 ವಾರಗಳ 'ನಶಾ ಮುಕ್ತ ಯುವ ಅಭಿಯಾನ'ಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಯುವಜನರನ್ನು ಮಾದಕ ವ್ಯಸನದಿಂದ ರಕ್ಷಿಸುವುದು, ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಮತ್ತು 'ವಿಕಸಿತ ಭಾರತ @2047' ರಾಷ್ಟ್ರೀಯ ಪರಿಕಲ್ಪನೆಗೆ ಸೂಕ್ತ ಬೆಂಬಲ ನೀಡುವುದು ಈ ಜಾಗೃತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮನೋರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರುಣಾ ಯಡಿಯಾಳ್ ಭಾಗವಹಿಸಿ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ತೀವ್ರ ಮಾನಸಿಕ ಮತ್ತು ನರಮಂಡಲದ ಹಾನಿಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗದೆ, ಮುಂಚಿತವಾಗಿಯೇ ಜಾಗೃತಿ ಹೊಂದಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

‘ಮೈ ಭಾರತ್’ ದಕ್ಷಿಣ ಕನ್ನಡ ಉಪನಿರ್ದೇಶಕ ಉಲ್ಲಾಸ್ ಕೆ.ಟಿ.ಕೆ. ಮಾತನಾಡಿ, ಸಮಾಜದಿಂದ ಮಾದಕ ದ್ರವ್ಯದ ಪಿಡುಗನ್ನು ನಿರ್ಮೂಲನೆ ಮಾಡಲು ಯುವಜನತೆ ಸಕ್ರಿಯ ನಾಯಕತ್ವ ವಹಿಸಬೇಕು ಎಂದರು. ಸೇಂಟ್ ಆಗ್ನೆಸ್ ಕಾಲೇಜಿನ ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ. ಉದಯಕುಮಾರ್ ಅವರು 100 ವಾರಗಳ ಈ ಯೋಜನೆಯ ರೂಪುರೇಖೆಯನ್ನು ಹಂಚಿಕೊಂಡು, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಪರಸ್ಪರ ಜಾಗೃತಿ ಮೂಡಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಗಣ್ಯರು ಯಾವುದೇ ರೀತಿಯ ಹಾನಿಕಾರಕ ವಸ್ತುಗಳಿಂದ ದೂರವಿರುವುದಾಗಿ ಹಾಗೂ ಸಮುದಾಯದಲ್ಲಿ ಸಕ್ರಿಯವಾಗಿ ಜಾಗೃತಿ ಮೂಡಿಸುವುದಾಗಿ 'ನಶಾ ಮುಕ್ತಿ ಸಂಕಲ್ಪ' ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದರೊಂದಿಗೆ ಬೃಹತ್ ಸಹಿ ಸಂಗ್ರಹ ಅಭಿಯಾನ ಹಾಗೂ ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಬಿಂಬಿಸುವ ಪ್ರಭಾವಶಾಲಿ ಬೀದಿ ನಾಟಕ ಮತ್ತು ಸಾಂಸ್ಕೃತಿಕ ರೂಪಕಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮೈ ಭಾರತ್ ಜಗದೀಶ್ ಕೆ., ಮಹಿಳಾ ಕೋಶದ ಸಂಚಾಲಕಿ ಲವಿತಾ ರಮ್ಯಾ ಡಿಸೋಜ ಹಾಗೂ ಎನ್‍ಎಸ್‍ಎಸ್ ಯೋಜನಾಧಿಕಾರಿ ಪ್ರೀತಾ ಟೌರೊ ಮತ್ತಿತ್ತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ