image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿ.ಸಿ. ಮನ್ನಾ ಭೂಮಿ ಹಂಚಿಕೆ ವಿಳಂಬ: ಸಚಿವ ಯು.ಟಿ. ಖಾದರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಹೋರಾಟದ ಎಚ್ಚರಿಕೆ

ಡಿ.ಸಿ. ಮನ್ನಾ ಭೂಮಿ ಹಂಚಿಕೆ ವಿಳಂಬ: ಸಚಿವ ಯು.ಟಿ. ಖಾದರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಹೋರಾಟದ ಎಚ್ಚರಿಕೆ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಲಿತರಿಗಾಗಿ ಮೀಸಲಿರಿಸಿದ ಡಿ.ಸಿ. ಮನ್ನಾ ಭೂಮಿಯ ಮಂಜೂರಾತಿಗಾಗಿ ಕಳೆದ 30 ವರ್ಷಗಳಿಂದ ದಲಿತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಮಂಗಳೂರಿನ ವುಡ್‌ಲ್ಯಾಂಡ್ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪ್ರಮುಖರಾದ ರಮೇಶ್ ಕೋಟ್ಯಾನ್, ಸರ್ಕಾರದ ದಲಿತ ವಿರೋಧಿ ನೀತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರ ನಡವಳಿಕೆಯನ್ನು ಕಟುವಾಗಿ ಟೀಕಿಸಿದರು. ಜಿಲ್ಲಾಧಿಕಾರಿಗಳ ಸಭೆಗಳಲ್ಲಿ ಭೂಮಿ ಹಂಚಿಕೆ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ 'ಡ್ರಾಫ್ಟ್ ರೂಲ್-2017' ತಿದ್ದುಪಡಿಯಾಗಬೇಕು ಎಂಬ ನೆಪ ಒಡ್ಡಲಾಗುತ್ತಿದ್ದು, ಉಸ್ತುವಾರಿ ಸಚಿವರು ಮಂಗಳೂರಿನಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸದೇ ದಲಿತ ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ದ್ರೋಹ ಎಸಗಿದ್ದಾರೆ, ಇದೇ ರೀತಿ ಅಂಬೇಡ್ಕರ್ ವೃತ್ತದ ವಿಷಯದಲ್ಲೂ ನಿರಾಸಕ್ತಿ ತೋರಿದ್ದಾರೆ ಎಂದು ಆರೋಪಿಸಿದರು.

ಕರಾವಳಿ ಅಭಿವೃದ್ಧಿಗೆ ಸಹಸ್ರಾರು ಕೋಟಿ ಹಾಗೂ ದೇವಸ್ಥಾನಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡುವ ಸರ್ಕಾರಕ್ಕೆ, ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದಲಿತರ ಭೂಮಿ ಸಮಸ್ಯೆಯನ್ನು ಬಗೆಹರಿಸಲು ಇಚ್ಛಾಶಕ್ತಿ ಇಲ್ಲದಿರುವುದು ವಿಷಾದನೀಯ. ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದ್ದು, ಈ ಭೂಮಿ ಒತ್ತುವರಿ ಮಾಡಿರುವ ಪ್ರಭಾವಿಗಳನ್ನು ರಕ್ಷಿಸಲು ಸಚಿವರು ನಿಂತಿದ್ದಾರೆಯೇ ಎಂಬ ಅನುಮಾನ ಮೂಡಿದೆ ಎಂದು ದೂರಿದರು. ಹೀಗಾಗಿ ಮುಂಬರುವ ದಿನಗಳಲ್ಲಿ ಉಸ್ತುವಾರಿ ಸಚಿವರು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಅವರ ವಿರುದ್ಧ ಪ್ರತಿಭಟನೆ ನಡೆಸುವುದು, ಬಿತ್ತಿಪತ್ರ ಚಳವಳಿ, ಪಾದಯಾತ್ರೆ ಹಾಗೂ ಬೃಹತ್ ಪ್ರತಿಭಟನೆಗಳ ಮೂಲಕ ಸರ್ಕಾರದ ದಲಿತ ವಿರೋಧಿ ನೀತಿಯ ವಿರುದ್ಧ ವಿವಿಧ ಹಂತಗಳಲ್ಲಿ ತೀವ್ರ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿದ್ದ ಎಲ್ಲಾ ಮುಖಂಡರು ಮೇಲಿನ ಆರೋಪಗಳಿಗೆ ಧ್ವನಿಗೂಡಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ರಘು ಕೆ. ಎಕ್ಕಾರ್, ಅಶೋಕ್ ಕೊಂಚಾಡಿ, ಎಸ್.ಪಿ. ಆನಂದ, ಚಂದ್ರ ಕುಮಾರ್, ಗಿರೀಶ್ ಕುಮಾರ್ ಯು.ಕೆ, ರೋಹಿತ್ ಉಳ್ಳಾಲ್, ಕೃಷ್ಣಾನಂದ ಡಿ, ಜಗದೀಶ್ ಪಾಂಡೇಶ್ವರ, ಸರೋಜಿನಿ ಬಂಟ್ವಾಳ, ಯಶೋಧ ಹೊಸಬೆಟ್ಟು, ರಮೇಶ್ ಕಾವೂರು, ಸಂಜೀವ ಆರ್. ಬೆಳ್ತಂಗಡಿ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ