ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ವಿದ್ಯಾರ್ಥಿ ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸುವ ಸಲುವಾಗಿ 'ಅಕಾಡೆಮಿಡ್ ಒಂಜಿ ದಿನ , ಬಲೆ ತುಳು ಓದುಗ' ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಓದುವ ಅಭಿಯಾನಕ್ಕೆ ಚಾಲನೆ ನೀಡುವ ಹಾಗೂ ಪ್ರಥಮ ಕಾರ್ಯಕ್ರಮದ ಉದ್ಘಾಟನೆಯು ಅ.25ರಂದು ಬೆಳಿಗ್ಗೆ 10.00 ಗಂಟೆಗೆ ಉರ್ವಾಸ್ಟೋರ್ ನಲ್ಲಿರುವ ತುಳು ಅಕಾಡೆಮಿಯ ತುಳು ಭವನದ ಗ್ರಂಥಾಲಯದಲ್ಲಿ ನಡೆಯಲಿದೆ. ಓದುವ ಅಭಿಯಾನಕ್ಕೆ ಹಿರಿಯ ತುಳು ವಿದ್ವಾಂಸ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಅವರು ಚಾಲನೆ ನೀಡಿ ದಿಕ್ಸೂಚಿ ಸಂದೇಶ ನೀಡುವರು.
'ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ' ಅಭಿಯಾನದ ಮೊದಲ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ 25 ವಿದ್ಯಾರ್ಥಿಗಳು ಭಾಗವಹಿಸುವರು. ಬಲೆ ತುಳು ಓದುಗ ಕಾರ್ಯಕ್ರಮದ ಬೆಳಗ್ಗಿನ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳು ತಮ್ಮಿಷ್ಟದ ತುಳು ಪುಸ್ತಕವೊಂದನ್ನು ಆಯ್ದುಕೊಂಡು ಗ್ರಂಥಾಲಯದಲ್ಲಿ ಓದುವ ಹಾಗೂ ಚರ್ಚಿಸುವ ಚಟುವಟಿಕೆಯಲ್ಲಿ ಭಾಗಿಯಾಗುವರು. ಸಂಜೆ ಸಮಾರೋಪದ ವೇಳೆಯಲ್ಲಿ ಪ್ರತಿ ವಿದ್ಯಾರ್ಥಿಗಳು ತಾವು ಓದಿದ ಕೃತಿಯ ಬಗ್ಗೆ ದಿಕ್ಸೂಚಿ ಸಂದೇಶ ನೀಡಿದ ವಿದ್ವಾಂಸರ ಮುಂದೆ ಎರಡು ಮೂರು ನಿಮಿಷಗಳ ಅಭಿಪ್ರಾಯವನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ.
ಅಕಾಡೆಮಿಯ ಗ್ರಂಥಾಲಯದಲ್ಲಿ ತುಳುವಿಗೆ ಸಂಬಂಧಿಸಿದ ತುಳು ಭಾಷೆಯ ಸುಮಾರು 2500 ಕೃತಿಗಳಿವೆ, ಅದೇ ರೀತಿಯಲ್ಲಿ ತುಳುವಿಗೆ ಸಂಬಂಧಿಸಿದ ಕನ್ನಡ ಭಾಷೆಯಲ್ಲಿ ಪ್ರಕಟವಾಗಿರುವ ಸುಮಾರು 2000 ಕೃತಿಗಳು ಲಭ್ಯ ಇದ್ದು, ತುಳು ಸಾಹಿತ್ಯ , ತುಳು ಭಾಷೆಯ ಚರಿತ್ರೆ, ತುಳು ಸಂಸ್ಕೃತಿ, ತುಳು ಜ್ಞಾನಭಂಡಾರದ ಅಗಾಧತೆಯ ಅರಿವನ್ನು ವಿದ್ಯಾರ್ಥಿ ಯುವಜನರಿಗೆ ಮೂಡಿಸಬೇಕೆನ್ನುವ ಹಿನ್ನೆಲೆಯಲ್ಲಿ "ಅಕಾಡೆಮಿಡ್ ಒಂಜಿ ದಿನ , ಬಲೆ ತುಳು ಓದುಗ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಂಘ ಸಂಸ್ಥೆಗಳು ಕೂಡ ಮುಂಚಿತವಾಗಿ ತಿಳಿಸಿ ಈ ಅಭಿಯಾನದಲ್ಲಿ ಭಾಗಿಯಾಗಬಹುದಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.