ಬೆಳ್ತಂಗಡಿ : ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ತನಿಖೆ ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಗಳನ್ನು ಖುಲಾಸೆಗೊಳಿಸಿ ವರದಿ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಹಾಗೂ ಮರುತನಿಖೆಗೆ ಕೋರಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸಿಬಿಐನ ತನಿಖಾ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿತ್ತು. "ಸಿಬಿಐ ತನಿಖಾಧಿಕಾರಿ ಸ್ವತಂತ್ರ ತನಿಖೆ ನಡೆಸುವ ಬದಲು ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಿದ್ದಾರೆ. ಹಿಂದೆ ಸಂಗ್ರಹಿಸಿದ ಸಾಕ್ಷ್ಯಗಳನ್ನು ಮಾತ್ರ ಪರಿಶೀಲಿಸಿ ವರದಿ ಸಲ್ಲಿಸಿರುವುದು ಸಿಬಿಐನ ಕಳಪೆ ಹಾಗೂ ಸ್ವತಂತ್ರವಲ್ಲದ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ" ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು.