ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಮತ್ತು ಹಣಕಾಸು ಸಲಹೆಗಾರ ಎಲ್.ಕೆ. ಅತೀಕ್ ಅವರ ಉಪಸ್ಥಿತಿಯಲ್ಲಿ ಮುಡಾ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಮುಡಾ ಮಹಾ ಯೋಜನೆಯ ಕರಡು ಪ್ರತಿಗೆ ಸರ್ಕಾರದಿಂದ ಶೀಘ್ರ ಅನುಮೋದನೆ ನೀಡುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ನಗರದ ಮಹತ್ವಾಕಾಂಕ್ಷೆಯ 'ಮಂಗಳೂರು ಐ' ಯೋಜನೆಗೆ ಕದ್ರಿ ಪಾರ್ಕ್ ಎದುರು 5 ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಈ ಯೋಜನೆಯ ಅನುಷ್ಠಾನದ ಸಿದ್ಧತೆಗಳ ಕುರಿತು ಎಲ್.ಕೆ. ಅತೀಕ್ ಅವರು ಅಧಿಕಾರಿಗಳಿಂದ ಸವಿಸ್ತಾರ ಮಾಹಿತಿ ಪಡೆದುಕೊಂಡರು.
ಇದಲ್ಲದೆ, ಬಟ್ಟಪ್ಪಾಡಿಯಿಂದ ಸಸಿಹಿತ್ಲುವರೆಗೆ ಕೋಸ್ಟಲ್ ರಸ್ತೆ ಅಭಿವೃದ್ಧಿ, ಅದಕ್ಕಿರುವ ಸಿಆರ್‌ಝಡ್ (CRZ) ಸಮಸ್ಯೆಗಳು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಸಾಧಕ-ಬಾಧಕಗಳ ಕುರಿತು ಸಮಾಲೋಚಿಸಲಾಯಿತು. ನಗರದಲ್ಲಿ ವಾಹನ ಸಂಚಾರ ಸುಗಮಗೊಳಿಸಲು ವಿವಿಧೆಡೆ ಅಂಡರ್ ಪಾಸ್ ನಿರ್ಮಾಣ ಹಾಗೂ ಕೊಟ್ಟಾರ ಚೌಕಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದವರೆಗೆ ಸ್ಮಾರ್ಟ್ ರಸ್ತೆ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪಂಚಾಯತ್ ಸಿಇಒ ವಿನಾಯಕ ಕಾರ್ಬಾರಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ್, ಮುಡಾ ಆಯುಕ್ತ ಅಬ್ದುಲ್ ನಜೀರ್, ಆರ್ಕಿಟೆಕ್ಟ್ ಸುಪ್ರಿತ್ ಆಳ್ವ ಹಾಗೂ ಕ್ರೆಡಾಯ್, ಪ್ರವಾಸೋದ್ಯಮ, ಕೆಯುಐಡಿಎಫ್‌ಸಿ, ಸಿಆರ್‌ಝಡ್ ಇಲಾಖೆ ಸೇರಿದಂತೆ ವಿವಿಧ ಭಾಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.