ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಿಪಿಎಲ್ ಕಾರ್ಡ್‌ದಾರರಿಗೆ ರೆಡ್‌ಕ್ರಾಸ್ ಸಂಸ್ಥೆಯಿಂದ ಉಚಿತವಾಗಿ ರಕ್ತ ಒದಗಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಮುಂದಿನ ವರ್ಷದಿಂದ ಇದು ಕಾರ್ಯಗತಗೊಳ್ಳಲಿದೆ ಎಂದು ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
ನಗರದ ಮಣ್ಣಗುಡ್ಡೆ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ. ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಹಾಗೂ ರೆಡ್‌ಕ್ರಾಸ್ ಸೊಸೈಟಿ ಜಂಟಿಯಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು ಹಾಗೂ ಅಗತ್ಯವಿರುವ ರೋಗಿಗಳಿಗೆ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದ್ದು, ಶೀಘ್ರದಲ್ಲೇ ಇದನ್ನು ಜಿಲ್ಲೆಯ ಎಲ್ಲಾ ಬಿಪಿಎಲ್ ಕಾರ್ಡ್‌ದಾರರಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲ ರಾಮ್‌ಪ್ರಸಾದ್ ವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ರಾಘವೇಂದ್ರ ರಾವ್ ಸ್ವತಃ ರಕ್ತ ನೀಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಣ್ಣಗುಡ್ಡೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಕೆಎಂಸಿ ಆಸ್ಪತ್ರೆಯ ಡಾ. ಕಿಶನ್ ಪ್ರೇಮ್, ಡಾ. ಸಾಹಿಸ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಅಧ್ಯಕ್ಷ ಸತೀಶ್ ಪೂಜಾರಿ ಅಶೋಕನಗರ ಸ್ವಾಗತಿಸಿ, ಆಂತರಿಕ ಲೆಕ್ಕಪರಿಶೋಧಕ ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಯೆಯ್ಯಾಡಿ, ಕೋಶಾಧಿಕಾರಿ ಸತೀಶ್ ಪೂಜಾರಿ ಉರ್ವ, ಸ್ಥಾಪಕ ಅಧ್ಯಕ್ಷ ಮೋಹನ್ ಅತ್ತಾವರ, ಲೋಕೇಶ್ ಸುರತ್ಕಲ್, ದಿನೇಶ್ ಕುಂಜತ್ತಬೈಲ್, ಕಿರಣ್ ಲೇಡಿಹಿಲ್ ಹಾಗೂ ರಾಜೇಶ್ ಉಪಸ್ಥಿತರಿದ್ದರು. ಈ ಶಿಬಿರವನ್ನು ಕೆಎಂಸಿ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಶ್ರೀನಿವಾಸ್ ಹಾಸ್ಪಿಟಲ್ ಮುಕ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಲಾಯಿತು.