image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಬಡ್ಡಿಯಲ್ಲಿ ಮಿಲಾಗ್ರಿಸ್ ಕಾಲೇಜಿಗೆ ಜಯ

ಕಬಡ್ಡಿಯಲ್ಲಿ ಮಿಲಾಗ್ರಿಸ್ ಕಾಲೇಜಿಗೆ ಜಯ

ಮಂಗಳೂರು : ಮಂಗಳೂರಿನ ಕಾರ್ ಸ್ಟ್ರೀಟ್‌ನ ಬಿ.ಇ.ಎಂ. ಪದವಿ ಪೂರ್ವ ಕಾಲೇಜು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಂಗಳೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ–2026ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಐತಿಹಾಸಿಕ ಸಾಧನೆ ಮಾಡಿದೆ. ಈ ಪಂದ್ಯಾವಳಿಯ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಾಲೇಜು ಅಪರೂಪದ ಅವಳಿ ಜಯ ದಾಖಲಿಸಿದೆ.

ಬಾಲಕಿಯರ ವಿಭಾಗದ ತೀವ್ರ ಪೈಪೋಟಿಯ ಫೈನಲ್ ಪಂದ್ಯದಲ್ಲಿ ಮಿಲಾಗ್ರಿಸ್ ತಂಡವು ಅತ್ಯುತ್ತಮ ರಕ್ಷಣಾತ್ಮಕ ಆಟ ಹಾಗೂ ಚುರುಕಿನ ರೈಡಿಂಗ್ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿತು. ಬಾಲಕರ ವಿಭಾಗದಲ್ಲಿಯೂ ಸಂಘಟಿತ ಹಾಗೂ ಶಿಸ್ತಿನ ಆಟ ಪ್ರದರ್ಶಿಸಿದ ಮಿಲಾಗ್ರಿಸ್ ತಂಡವು ಎದುರಾಳಿಗಳನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಅಮೋಘ ಸಾಧನೆಯೊಂದಿಗೆ ಬಾಲಕರ ಹಾಗೂ ಬಾಲಕಿಯರ ಎರಡೂ ತಂಡಗಳು ಮುಂದಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ.

ಆಟಗಾರರ ಶಿಸ್ತು, ಕಠಿಣ ಪರಿಶ್ರಮ, ತಂಡಸ್ಫೂರ್ತಿ ಹಾಗೂ ತರಬೇತುದಾರರ ಸಮರ್ಪಿತ ಮಾರ್ಗದರ್ಶನವೇ ಈ ಐತಿಹಾಸಿಕ ಅವಳಿ ಗೆಲುವಿಗೆ ಕಾರಣ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಾಧನೆಗೈದ ಆಟಗಾರರನ್ನು ಕಾಲೇಜಿನ ಸಂಚಾಲಕರಾದ ವಂ. ಫಾ. ಐವನ್ ಮೈಕೆಲ್ ರೊಡ್ರಿಗಸ್, ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್, ತರಬೇತುದಾರರಾದ ಶ್ರೀ ಆಕಾಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಿದ್ದಾರೆ.

Category
ಕರಾವಳಿ ತರಂಗಿಣಿ