image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ವಿವಿ ಕ್ರಾಸ್‌ಕಂಟ್ರಿ: ಆಳ್ವಾಸ್‌ಗೆ ಸತತ 23ನೇ ಬಾರಿ ಚಾಂಪಿಯನ್‌ಶಿಪ್

ಮಂಗಳೂರು ವಿವಿ ಕ್ರಾಸ್‌ಕಂಟ್ರಿ: ಆಳ್ವಾಸ್‌ಗೆ ಸತತ 23ನೇ ಬಾರಿ ಚಾಂಪಿಯನ್‌ಶಿಪ್

ಮೂಡುಬಿದಿರೆ: ಸುಳ್ಯದ ಎನ್‌ಎಂಸಿ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಅಂತರ-ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ತಂಡಗಳು ಸತತ 23ನೇ ಬಾರಿಗೆ ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಂಡು ಐತಿಹಾಸಿಕ ಸಾಧನೆ ಮಾಡಿವೆ.

ಪುರುಷರ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್ ತಂಡವು ಒಟ್ಟು 10 ಅಂಕಗಳೊಂದಿಗೆ ಕುರುಂಜಿ ವಿಶ್ವನಾಥ ಗೌಡ ಮೆಮೋರಿಯಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ವಿಭಾಗದ ವ್ಯಕ್ತಿಗತ ಸ್ಪರ್ಧೆಯಲ್ಲಿ ಶೈಲೇಶ್ ಪ್ರಥಮ, ಸುನಿಲ್ ದ್ವಿತೀಯ ಹಾಗೂ ರೋಹಿತ್ ತೃತೀಯ ಸ್ಥಾನ ಗಳಿಸಿದರೆ, ಜುಗುನ್ನು ಕುಮಾರ್ ನಾಲ್ಕನೇ, ರೋಹನ್ ಕುಮಾರ್ ಐದನೇ ಹಾಗೂ ಅಜಯ್ ಕುಮಾರ್ ಪಾಟೀಲ್ ಆರನೇ ಸ್ಥಾನಗಳನ್ನು ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲೂ 10 ಅಂಕ ಗಳಿಸಿದ ಆಳ್ವಾಸ್ ತಂಡವು ಸಮಗ್ರ ಚಾಂಪಿಯನ್‌ಶಿಪ್‌ನೊಂದಿಗೆ ಕೈಕುರೆ ಶ್ರೀ ರಾಮಣ್ಣ ಗೌಡ ಟ್ರೋಫಿಗೆ ಭಾಜನವಾಯಿತು. ಈ ವಿಭಾಗದಲ್ಲಿ ಭಾಗೀರಥಿ ಪ್ರಥಮ, ಯಾಶಿ ದ್ವಿತೀಯ ಹಾಗೂ ಆರತಿ ತೃತೀಯ ಸ್ಥಾನ ಗಳಿಸಿದರು. ಜೊತೆಗೆ ಆರಾಧನಾ ನಾಲ್ಕನೇ, ಆರತಿ ಅರ್ಜುನ್ ಐದನೇ ಹಾಗೂ ಜ್ಯೋತಿ ಏಳನೇ ಸ್ಥಾನ ಪಡೆದು ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಬರುವ ನವೆಂಬರ್‌ನಲ್ಲಿ ಉಡುಪಿಯಲ್ಲಿ ನಡೆಯಲಿರುವ ಅಖಿಲ ಭಾರತ ಪುರುಷರ ಹಾಗೂ ಮಹಿಳೆಯರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಆಳ್ವಾಸ್‌ನ 12 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರೀಯ ಮಟ್ಟದ ಕೂಟದಲ್ಲಿ ಮಂಗಳೂರು ವಿವಿಯನ್ನು ಆಳ್ವಾಸ್‌ನ ವಿದ್ಯಾರ್ಥಿಗಳೇ ಪ್ರತಿನಿಧಿಸಲಿದ್ದಾರೆ. ವಿಜೇತ ಕ್ರೀಡಾಪಟುಗಳ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ