ಉಜಿರೆ : ಉಜಿರೆಯ ಸಿದ್ಧವನದ ರುಡ್‌ಸೆಟ್ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ‘ಕೃಷಿ ಉದ್ಯಮಿ’ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಗತಿಪರ ಕೃಷಿಕ ಹಾಗೂ ಬೆಳ್ತಂಗಡಿ ತಾಲೂಕು ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಜಗದೀಶ್ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೃಷಿಯನ್ನು ಕೇವಲ ಜೀವನೋಪಾಯದ ಮಾರ್ಗವಾಗಿ ನೋಡದೆ, ವೈಜ್ಞಾನಿಕ ಜ್ಞಾನ, ಕೌಶಲ್ಯ ಮತ್ತು ಮಾರುಕಟ್ಟೆ ಅರಿವಿನೊಂದಿಗೆ ಉದ್ಯಮವನ್ನಾಗಿ ರೂಪಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು. ಬೆಳೆ ಬೆಳೆಯುವುದರ ಜೊತೆಗೆ ಮೌಲ್ಯವರ್ಧನೆ ಮಾಡುವುದು, ಡ್ರ್ಯಾಗನ್ ಫ್ರೂಟ್, ಪಪ್ಪಾಯ, ಬಾಳೆ ಬೆಳೆಗಳೊಂದಿಗೆ ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಹಾಗೂ ಸಾವಯವ ಗೊಬ್ಬರ ತಯಾರಿಕೆಯಂತಹ ಪೂರಕ ಚಟುವಟಿಕೆಗಳನ್ನು ಇಂಜಿನಿಯರಿಂಗ್ ಮನೋಭಾವದಿಂದ ಕೈಗೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ. ವಿಜಯಕುಮಾರ್ ಅವರು ಮಾತನಾಡಿ, ತರಬೇತಿಯಲ್ಲಿ ಕಲಿತ ಕೌಶಲ್ಯವನ್ನು ಕಾರ್ಯರೂಪಕ್ಕೆ ತಂದು ಸ್ವಯಂ ಉದ್ಯೋಗದ ಮೂಲಕ ಪ್ರತಿಯೊಬ್ಬರೂ ಉದ್ಯಮ ಸ್ಥಾಪಿಸಬೇಕು. ತರಬೇತಿದಾರರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಪ್ರೇರೇಪಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುನಿಲ್ ಜಿ. ನಾಯಕ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶ್ರೀಮತಿ ಶ್ವೇತಾ ಪ್ರಾರ್ಥನೆ ಸಲ್ಲಿಸಿದರು. ತರಬೇತಿಯ ಅನುಭವ ಹಂಚಿಕೊಂಡ ಶಿಬಿರಾರ್ಥಿಗಳಾದ ಶ್ರೀಮತಿ ಬೇಬಿ ಹಾಗೂ ಶ್ರೀ ರಾಜು ಅವರು, ಪಡೆದ ಪ್ರಾಯೋಗಿಕ ತರಬೇತಿ ಮತ್ತು ಮಾರ್ಗದರ್ಶನವು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡಲು ಆತ್ಮವಿಶ್ವಾಸ ನೀಡಿದೆ ಎಂದು ತಿಳಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀ ಕರುಣಾಕರ ಜೈನ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.