ಮಂಗಳೂರು: ನಗರದ ಸಂತ ಆಗ್ನೆಸ್ ಕಾಲೇಜಿನ ಸಭಾಂಗಣದಲ್ಲಿ ಸೆಪ್ಟೆಂಬರ್ 19, 2026 ರಂದು ಯಶಸ್ವಿನಿ ಕದ್ರಿ ಅವರ ‘ಮಾಯಕದ ಕತೆಗಳು’ ಕೃತಿಯು ಬಿಡುಗಡೆಗೊಂಡಿತು. ಕಾಲೇಜಿನ ಐ.ಕ್ಯು.ಎ.ಸಿ, ಕನ್ನಡ ಸಂಘ ಹಾಗೂ ಬೆಂಗಳೂರಿನ ಬಹುರೂಪಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜನಪದ ತಜ್ಞ ಡಾ. ಕೆ. ಚಿನ್ನಪ್ಪ ಗೌಡ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಕೆ. ಚಿನ್ನಪ್ಪ ಗೌಡ, ‘ಮಾಯಕ’ ಎಂಬುದು ವಾಸ್ತವ ಲೋಕಕ್ಕೆ ಒಂದು ಶಕ್ತಿಶಾಲಿ ರೂಪಕವಾಗಿದೆ ಎಂದರು. ಮಾಯಕ ಮತ್ತು ವಾಸ್ತವ ಲೋಕಗಳೆರಡನ್ನೂ ಬೆಸೆದ ಈ ಕಥೆಗಳನ್ನು ಪ್ರೀತಿ, ಅಸಹನೆ, ಸಿಟ್ಟು, ಅಸೂಯೆ ಮತ್ತು ಛಲದಂತಹ ಮನುಷ್ಯ ಸಹಜ ಭಾವನೆಗಳ ಹಿನ್ನೆಲೆಯಲ್ಲಿ ಓದಬೇಕು. ಕಥೆಗಳು ಮನುಷ್ಯರ ನಡವಳಿಕೆಗಳನ್ನು ಕಾಣುವ ಕಿಟಕಿಗಳಂತಿವೆ ಎಂದು ತಿಳಿಸಿ, ಕೃತಿ ಓದುವಾಗ ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂತ ಆಗ್ನೆಸ್ ಸಿಬಿಎಸ್‌ಸಿ ಶಾಲೆಯ ಶಿಕ್ಷಕಿ ಯಶಸ್ವಿನಿ ಎಮ್. ಅವರು ಪುಸ್ತಕದ ಕಥೆಯೊಂದರ ಆಯ್ದ ಭಾಗಗಳನ್ನು ಕಾವ್ಯಾತ್ಮಕವಾಗಿ ವಾಚಿಸಿದರು. ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಸಂಪೂರ್ಣಾನಂದ ಬಳ್ಕೂರು ಹಾಗೂ ಕೃತಿಯ ಲೇಖಕಿ ಯಶಸ್ವಿನಿ ಕದ್ರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸಿ. ಡಾ. ಎಮ್. ವೆನಿಸ್ಸಾ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಉದಯ್ ಕುಮಾರ್ ಸ್ವಾಗತಿಸಿದರು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸ್ತ್ಯಾಂ ಪಾಯಸ್ ವಂದಿಸಿದರು ಮತ್ತು ಕನ್ನಡ ಉಪನ್ಯಾಸಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.