image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಸೆಪ್ಟೆಂಬರ್ 20 ರಂದು ಹುಟ್ಟೂರ ಅಭಿನಂದನೆ

ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಸೆಪ್ಟೆಂಬರ್ 20 ರಂದು ಹುಟ್ಟೂರ ಅಭಿನಂದನೆ

ಪುತ್ತೂರು : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಮೈಸೂರು ವಿಭಾಗದಿಂದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಸಹಕಾರಿ ಧುರೀಣ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರಿಗೆ ಸೆಪ್ಟೆಂಬರ್ 20 ರಂದು ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹುಟ್ಟೂರ ಅಭಿನಂದನಾ ಸಮಾರಂಭ ನಡೆಯಲಿದೆ. ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಊರ ನಾಗರಿಕರಿಂದ ಆಯೋಜಿಸಲಾದ ಈ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಿಂದ ತೆರೆದ ಜೀಪಿನಲ್ಲಿ ಭವ್ಯ ಮೆರವಣಿಗೆಯ ಮೂಲಕ ಶಶಿಕುಮಾರ್ ರೈ ಅವರಿಗೆ ಸ್ವಾಗತ ಕೋರಲಾಗುವುದು ಎಂದು ಸಮಿತಿ ತಿಳಿಸಿದೆ.

ಈ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಮಾತುಗಳನ್ನಾಡಲಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಲಿದ್ದಾರೆ. ವಿಶೇಷ ಅಭ್ಯಾಸಗತರಾಗಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ, ಬೆಂಗಳೂರು ಚುನಾವಣಾ ಪ್ರಾಧಿಕಾರದ ಜಂಟಿ ನಿಬಂಧಕ ಬಿ.ಕೆ. ಸಲೀಂ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿಯಾದ ಶಶಿಕುಮಾರ್ ರೈ  ಅವರು ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಈ ಹಿಂದೆ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿ, ಪುತ್ತೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ ಮತ್ತು ಸದಸ್ಯರ ಹಿತಾಸಕ್ತಿಗೆ ಸದಾ ಆದ್ಯತೆ ನೀಡುತ್ತಾ ಬಂದಿದ್ದಾರೆ. 2024 ರ ಡಿಸೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಪುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಳಿಕ 2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ರಾಜ್ಯಮಟ್ಟದಲ್ಲಿ ಎತ್ತಿ ಹಿಡಿದರು. ಪ್ರಸ್ತುತ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿಯ ಮೈಸೂರು ವಿಭಾಗದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 18 ಮತಗಳನ್ನು ಪಡೆದು ಜಯಗಳಿಸಿದ್ದು, 62 ವರ್ಷಗಳ ಇತಿಹಾಸದಲ್ಲಿ ಈ ಸಹಕಾರ ಮಹಾಮಂಡಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಮೊದಲ ನಿರ್ದೇಶಕ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲೂ ತೊಡಗಿಸಿಕೊಂಡಿರುವ ಶಶಿಕುಮಾರ್ ರೈ ಅವರು ಪುತ್ತೂರು ತಾಲೂಕು ಬಂಟರಸಂಘದ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಾಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಚೆಂದ್‌ತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರಲ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇದೇ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಪಾರಾಕಜೆ ಶ್ರೀ ಪೂಮಾಣಿ ಕಿನ್ನಿಮಾಣಿ ಹುಲಿಭೂತ ದೇವಸ್ಥಾನ ಹಾಗೂ ರಣಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಸಂಚಾಲಕರಾಗಿ ಮತ್ತು ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ