ಮಂಗಳೂರು: ಕರಾವಳಿಯ ದಶಕಗಳ ಭಾವನಾತ್ಮಕ ಕನಸಾಗಿದ್ದ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದು ಪ್ರತಿಯೊಬ್ಬ ತುಳುವನಿಗೂ ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಕ್ಷಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ತಿಳಿಸಿದ್ದಾರೆ. ಈ ಐತಿಹಾಸಿಕ ನಿರ್ಧಾರಕ್ಕೆ ಶ್ರಮಿಸಿದ ರಾಜ್ಯ ಸರ್ಕಾರದ ದೃಢ ನಾಯಕತ್ವ ಹಾಗೂ ಕರಾವಳಿಯ ಪ್ರಭಾವಿ ಜನನಾಯಕರಿಗೆ ತುಳುನಾಡಿನ ಸಮಸ್ತ ಜನರ ಪರವಾಗಿ ಅವರು ಭಾವಪೂರ್ಣ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ತುಳುನಾಡು ಎಂದರೆ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ; ಅದು ಭವ್ಯ ಸಂಸ್ಕೃತಿ, ದೈವಾರಾಧನೆ, ಯಕ್ಷಗಾನ ಮತ್ತು ಭಾಷಿಕ ಸೌಹಾರ್ದತೆಯ ಪುಣ್ಯಭೂಮಿಯಾಗಿದೆ. ಕರಾವಳಿಯ ಕಲೆ, ಆಚಾರ-ವಿಚಾರ ಹಾಗೂ ಅಸ್ಮಿತೆಯ ಜೀವನಾಡಿಯಾಗಿರುವ ತುಳು ಭಾಷೆಗೆ ಸೂಕ್ತ ಗೌರವ ಒದಗಿಸುವಲ್ಲಿ ಧ್ವನಿಯಾದ ನಾಯಕರ ಕೊಡುಗೆ ಸ್ಮರಣೀಯವಾಗಿದೆ. ಕರಾವಳಿ ಭಾಗದ ಸಾಂಸ್ಕೃತಿಕ ಮತ್ತು ಭಾಷಿಕ ಹಕ್ಕುಗಳನ್ನು ಗೌರವಿಸಿ ಸರ್ಕಾರದ ಮಟ್ಟದಲ್ಲಿ ಈ ನಿರ್ಧಾರ ತಲುಪಲು ದೃಢ ಬೆಂಬಲವಾಗಿ ನಿಂತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಕರಾವಳಿಯ ಸೌಹಾರ್ದತೆ ಮತ್ತು ತುಳು ಭಾಷೆಯ ಉಳಿವಿಗಾಗಿ ನಿರಂತರ ಮಾರ್ಗದರ್ಶನ ನೀಡಿದ ಸನ್ಮಾನ್ಯ ಯು. ಟಿ. ಖಾದರ್ ಹಾಗೂ ವಿಧಾನ ಪರಿಷತ್ತಿನಲ್ಲಿ ತುಳು ಭಾಷೆಯ ಮಾನ್ಯತೆಗಾಗಿ ಸತತವಾಗಿ ಧ್ವನಿ ಎತ್ತಿ ವಿಷಯವನ್ನು ತರ್ಕಬದ್ಧವಾಗಿ ಮಂಡಿಸಿದ ಶಾಸಕ ಮಂಜುನಾಥ್ ಭಂಡಾರಿ ಅವರ ಶ್ರಮ ಶ್ಲಾಘನೀಯ ಎಂದಿದ್ದಾರೆ.
ಅಲ್ಲದೆ, ಕರಾವಳಿಯ ಸರ್ವ ಜನಾಂಗೀಯ ಭಾಷೆಯಾದ ತುಳುವಿಗೆ ರಾಜಕೀಯ ಹಾಗೂ ಆಡಳಿತಾತ್ಮಕ ಮನ್ನಣೆ ಸಿಗಲು ನಿರಂತರ ಶ್ರಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಾಂಸ್ಕೃತಿಕ ಹಕ್ಕುಗಳ ಪರ ಸೈದ್ಧಾಂತಿಕ ಹೋರಾಟ ನಡೆಸಿದ ಹಿರಿಯ ನಾಯಕ ಪಿ. ವಿ. ಮೋಹನ್, ದಶಕಗಳಿಂದ ತುಳು ಸಂಸ್ಕೃತಿ ಮತ್ತು ಜನಪದದ ಉಳಿವಿಗಾಗಿ ಶ್ರಮಿಸಿದ ಹಿರಿಯ ಧುರೀಣ ಹಾಗೂ ಮಾಜಿ ಸಚಿವ ರಮಾನಾಥ ರೈ ಮತ್ತು ಶಾಸನಸಭೆಯಲ್ಲಿ ತುಳು ಭಾಷೆಯ ಮಾನ್ಯತೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರ ಕ್ರಿಯಾಶೀಲತೆಯನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಈ ಸ್ಥಾನಮಾನವು ಕೇವಲ ಕಾಗದದ ಮೇಲಿನ ಆದೇಶವಾಗಿರದೆ ತುಳು ಸಾಹಿತ್ಯ, ಜಾನಪದ, ಯಕ್ಷಗಾನ, ನಾಟಕ ಹಾಗೂ ಸಂಶೋಧನೆಗೆ ಹೊಸ ಚೈತನ್ಯ ನೀಡಲಿದೆ. ಸರ್ಕಾರಿ ದಾಖಲೆಗಳು, ಆಡಳಿತಾತ್ಮಕ ರಂಗ ಹಾಗೂ ಶೈಕ್ಷಣಿಕ ವಲಯದಲ್ಲಿ ತುಳುವಿಗೆ ಸೂಕ್ತ ಸ್ಥಾನ ಸಿಗುವುದರಿಂದ ಮುಂದಿನ ಪೀಳಿಗೆಗೂ ಈ ಶ್ರೀಮಂತ ಭಾಷೆ ಬೆಳೆದು ಉಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ತುಳು ಭಾಷೆ ಉಳಿಯಲಿ, ತುಳುನಾಡು ಬೆಳೆಯಲಿ" ಎಂಬ ಆಶಯದೊಂದಿಗೆ ತುಳುನಾಡಿನ ಸಮಸ್ತ ಬಾಂಧವರ ಪರವಾಗಿ ನಾಯಕರಿಗೆ ಕೃತಜ್ಞತಾಪೂರ್ವಕ 'ಸೊಲ್ಮೆಲು' ಮತ್ತು ಅಭಿನಂದನೆಗಳನ್ನು ಸಲ್ಲಿಕೆಯಾಗಿವೆ.