ಮಂಗಳೂರು : ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಹಾರ್ದಿಕವಾಗಿ ಸ್ವಾಗತಿಸಿದೆ. ಈ ಮಹತ್ವದ ನಿರ್ಧಾರಕ್ಕೆ ಕಾರಣರಾದ ಮಾನ್ಯ ಮುಖ್ಯಮಂತ್ರಿಗಳು, ಸಚಿವ ಸಂಪುಟದ ಎಲ್ಲಾ ಸದಸ್ಯರು ಹಾಗೂ ಕರ್ನಾಟಕ ಸರ್ಕಾರಕ್ಕೆ ಸಂಘದ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಬಂಟ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ತುಳು ಕೇವಲ ಮಾತೃಭಾಷೆಯಷ್ಟೇ ಅಲ್ಲದೆ, ಅದು ಈ ಮಣ್ಣಿನ ಇತಿಹಾಸ, ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಅಸ್ಮಿತೆಯ ಜೀವಂತ ಪ್ರತೀಕವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಈ ಕ್ಷಣವು ಹಲವು ದಶಕಗಳ ಕನಸು, ನಿರಂತರ ಹೋರಾಟ ಮತ್ತು ಪರಿಶ್ರಮಗಳ ಫಲವಾಗಿದ್ದು, ತುಳು ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಧ್ವನಿ ಎತ್ತಿದ ಹಿರಿಯರು, ಸಾಹಿತಿಗಳು, ಸಂಶೋಧಕರು, ಕಲಾವಿದರು, ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಪ್ರತಿಯೊಬ್ಬ ತುಳು ಭಾಷಾ ಪ್ರೇಮಿಗಳ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
ಒಂದು ಭಾಷೆಗೆ ಅಧಿಕೃತ ಮಾನ್ಯತೆ ದೊರಕುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ, ಬದಲಾಗಿ ಒಂದು ಸಮುದಾಯದ ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆಯುವ ಗೌರವವಾಗಿದೆ. ಕನ್ನಡದ ನೆಲದಲ್ಲಿ ಕನ್ನಡದೊಂದಿಗೆ ತುಳು ಕೂಡ ಗೌರವದಿಂದ ಅರಳಲಿ ಹಾಗೂ ಆಡಳಿತ, ಶಿಕ್ಷಣ, ಸಾಹಿತ್ಯ ಮತ್ತು ಕಲಾ ಕ್ಷೇತ್ರಗಳಲ್ಲಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ಸಾಧನೆಯು ತುಳುವನ್ನು ಉಳಿಸಿ, ಪ್ರೀತಿಸಿದ ಪ್ರತಿಯೊಬ್ಬ ತುಳುವನ ತಲೆಮಾರುಗಳ ಕನಸಿನ ಸಾಕಾರವಾಗಿದೆ ಎಂದು ತಿಳಿಸಿದ್ದಾರೆ.