image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಸರ್ಕಾರದ ನಿರ್ಧಾರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆ

ತುಳು ಭಾಷೆಗೆ ಅಧಿಕೃತ ಸ್ಥಾನಮಾನ: ಸರ್ಕಾರದ ನಿರ್ಧಾರಕ್ಕೆ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆ

ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಾಚೀನ ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಅಧಿಕೃತ ಸ್ಥಾನಮಾನ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡ ಈ ನಿರ್ಧಾರಕ್ಕಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದೇಶ-ವಿದೇಶಗಳಲ್ಲಿ ನೆಲೆಸಿರುವ ಸಮಸ್ತ ತುಳು ಭಾಷಿಕರ ಪರವಾಗಿ ಅವರು ರಾಜ್ಯ ಸರ್ಕಾರಕ್ಕೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಈ ಸಕಾರಾತ್ಮಕ ನಿರ್ಧಾರವು ತುಳು ಭಾಷೆಯನ್ನು ಭಾರತೀಯ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ದೀರ್ಘಕಾಲದ ಪ್ರಕ್ರಿಯೆ ಮತ್ತು ಹೋರಾಟಕ್ಕೆ ಹೆಚ್ಚಿನ ಬಲ ನೀಡಲಿದೆ ಎಂದು ಡಾ. ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಜನತೆ ಹಾಗೂ ಭಾಷಾ ಅಭಿಮಾನಿಗಳ ಹಕ್ಕೊತ್ತಾಯಕ್ಕೆ ಸರ್ಕಾರವು ಸೂಕ್ತವಾಗಿ ಸ್ಪಂದಿಸಿರುವುದು ಶ್ಲಾಘನೀಯ ಎಂದಿದ್ದಾರೆ.

ಈ ಸಂದರ್ಭದಲ್ಲಿ 2009ರಲ್ಲಿ ಉಜಿರೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ತುಳು ಸಮ್ಮೇಳನವನ್ನು ಸ್ಮರಿಸಿದ ಅವರು, ಆ ಸಮ್ಮೇಳನವು ತುಳು ಭಾಷೆ, ನಾಡು, ನುಡಿ ಮತ್ತು ಶ್ರೀಮಂತ ಸಂಸ್ಕೃತಿಯತ್ತ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು. ಸಮ್ಮೇಳನದಲ್ಲಿ ನಿರ್ಮಿಸಲಾಗಿದ್ದ 'ತುಳುಗ್ರಾಮ'ದ ಕಲ್ಪನೆಯು ಪ್ರತಿಯೊಬ್ಬರ ಆಕರ್ಷಣೆಯ ಕೇಂದ್ರಬಿಂದುವಾಗಿ, ಸರ್ವಜನರ ಮುಕ್ತ ಪ್ರಶಂಸೆಗೆ ಪಾತ್ರವಾಗಿದ್ದನ್ನು ಅವರು ನೆನಪಿಸಿಕೊಂಡರು. ತುಳುನಾಡಿನ ಭಾಷಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವಲ್ಲಿ ಸರ್ಕಾರದ ಈ ತೀರ್ಮಾನವು ಪ್ರಮುಖ ಮೈಲಿಗಲ್ಲಾಗಿದ್ದು, ನಾಡಿನಾದ್ಯಂತ ಇರುವ ತುಳು ಅಭಿಮಾನಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ಡಾ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ