ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವುದು ಕರಾವಳಿ ಭಾಗದ ಸಮಸ್ತ ತುಳುವರ ಅನೇಕ ವರ್ಷಗಳ ನಿರಂತರ ಹೋರಾಟಕ್ಕೆ ಲಭಿಸಿದ ಐತಿಹಾಸಿಕ ಜಯವಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಸಂತಸ ವ್ಯಕ್ತಪಡಿಸಿದ್ದಾರೆ. ಕರಾವಳಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ದಶಕಗಳ ಕಾಲದ ಜನರ ಆಶಯ ಇದೀಗ ಈಡೇರಿದ್ದು, ಈ ಮಹತ್ವದ ನಿರ್ಧಾರದಿಂದ ಸುದೀರ್ಘ ಹೋರಾಟಕ್ಕೆ ಸಂಪೂರ್ಣ ಸಾರ್ಥಕತೆ ದೊರೆತಂತಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಈ ಪ್ರಮುಖ ಮೈಲಿಗಲ್ಲಿನ ಕುರಿತು ಮಾತನಾಡಿದ ಶಾಸಕರು, ತುಳು ಭಾಷೆಗೆ ಸೂಕ್ತ ಗೌರವ ಮತ್ತು ಸ್ಥಾನಮಾನ ಸಿಗಬೇಕೆಂಬ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತುಳುಪರ ಹೋರಾಟಗಾರರು, ಸಾಹಿತಿಗಳು ಹಾಗೂ ವಿವಿಧ ಸಂಘಟನೆಗಳೊಂದಿಗೆ ತಾವು ಅನೇಕ ರೀತಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಿದರು. ಶಾಸಕರಾಗಿ ವಿಧಾನಮಂಡಲದ ಅಧಿವೇಶನಗಳಲ್ಲಿಯೂ ಈ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ನಿರಂತರ ಪ್ರಯತ್ನ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸುನಿಲ್ ಕುಮಾರ್ ಕಾರ್ಕಳ ಅವರು ಈ ನ್ಯಾಯಯುತ ಬೇಡಿಕೆಗೆ ವಿಶೇಷ ಮನ್ನಣೆ ನೀಡಿ ಪ್ರಕ್ರಿಯೆಗಳಿಗೆ ವೇಗ ನೀಡಿದ್ದರು. ತದನಂತರ ಡಾ. ಮೋಹನ್ ಆಳ್ವ ಅವರ ನೇತೃತ್ವದ ಸಮಿತಿಯು ಸಿದ್ಧಪಡಿಸಿ ಸಲ್ಲಿಸಿದ ಸಮಗ್ರ ವರದಿಯು ಈ ಹೋರಾಟಕ್ಕೆ ಮತ್ತಷ್ಟು ಆಡಳಿತಾತ್ಮಕ ಮತ್ತು ಸಾಂವಿಧಾನಿಕ ಬಲವನ್ನು ನೀಡಿತ್ತು ಎಂದು ಅವರು ವಿವರಿಸಿದರು.
ನಾಡಿನ ತುಳು ಭಾಷಿಕರ ಈ ಬಹುದಿನಗಳ ಕನಸನ್ನು ನನಸು ಮಾಡಿ, ಈ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿರುವ ಮಾನ್ಯ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರಿಗೆ ಶಾಸಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಕರಾವಳಿ ಭಾಗದ ಮತ್ತೊಂದು ಪ್ರಮುಖ ಆಶಯವಾದ 'ದಕ್ಷಿಣ ಕನ್ನಡ' ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯ ಕುರಿತಾಗಿಯೂ ಸೂಕ್ತ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಬೇಡಿಕೆಯೂ ಶೀಘ್ರದಲ್ಲಿಯೇ ಈಡೇರಲಿದೆ ಎಂಬ ಬಲವಾದ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ.