ಮಂಗಳೂರು : ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್.ಜೆ.ಇ.ಸಿ) ಕರಾಟೆ ತಂಡವು ಬೆಂಗಳೂರಿನ ಆರ್.ವಿ.ಸಿ.ಎ ವತಿಯಿಂದ ಸೆಪ್ಟೆಂಬರ್ 11 ಮತ್ತು 12, 2026ರಂದು ಆಯೋಜಿಸಲಾಗಿದ್ದ ವಿಟಿಯು ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದೆ. ಕಾಲೇಜಿನ ಪಿಇಡಿ ವನೀಶಾ ರೋಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಹಾಗೂ ದೃಢಸಂಕಲ್ಪದ ಮೂಲಕ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಚಾಂಪಿಯನ್‌ಶಿಪ್‌ನಲ್ಲಿ 3ನೇ ಸೆಮಿಸ್ಟರ್ ಎಂಬಿಎ ವಿದ್ಯಾರ್ಥಿನಿ ಭುವಿ ಜಿ. ಎಸ್. ಅವರು 55 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಥಮ ವರ್ಷದ ಇಸಿಇ ವಿದ್ಯಾರ್ಥಿನಿ ರೋನ್ಸಿಯಾ ಗ್ವಿನೆತ್ ಲೋಬೋ 61 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಥಮ ವರ್ಷದ ವಿ.ಎಲ್.ಎಸ್.ಐ ವಿದ್ಯಾರ್ಥಿ ಚಿನ್ಮಯ್ ಕೇಶವ ಪೂಜಾರಿ 67 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದರೆ, ಪ್ರಥಮ ವರ್ಷದ ಸಿ.ಎಸ್.ಇ ವಿದ್ಯಾರ್ಥಿ ಮೊಹಮ್ಮದ್ ಯುಶಾ 75 ಕೆ.ಜಿ.ಗಿಂತ ಕಡಿಮೆ ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರನ್ನು ಎಸ್.ಜೆ.ಇ.ಸಿ ಆಡಳಿತ ಮಂಡಳಿಯು ಅಭಿನಂದಿಸಿದೆ. ವಿದ್ಯಾರ್ಥಿಗಳ ಈ ಸಾಧನೆಯು ಅವರ ಶಿಸ್ತು ಹಾಗೂ ಕ್ರೀಡಾ ಮನೋಭಾವಕ್ಕೆ ಸಾಕ್ಷಿಯಾಗಿದೆ.