ಮಂಗಳೂರು: ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಮ್ಮ ದೇಶದ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ರಾಜ್ಯದ ಅಧಿಕೃತ ಕಲೆಯಾಗಿ ಘೋಷಿಸಬೇಕೆಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರು ಹಾಗೂ ಕಲಾಭಿಮಾನಿಗಳ ಪರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಸ್ವೀಕರಿಸಿದ ಸಚಿವರು ಈ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಾವಿರ ವರ್ಷಗಳ ಇತಿಹಾಸವಿರುವ, ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಗಳಿಸಿದ ಹಾಗೂ ಜಾತಿ, ಮತ, ಪಂಥವಿಲ್ಲದೆ ಸರ್ವರ ಮನಸ್ಸನ್ನು ಗೆದ್ದಿರುವ ಯಕ್ಷಗಾನ ಕಲೆ ರಾಜ್ಯದ ಕಲೆಯಾಗಿ ಘೋಷಣೆಯಾದರೆ ಅದೊಂದು ಐತಿಹಾಸಿಕ ಕ್ಷಣವಾಗಲಿದೆ. ಸಚಿವರಾದ ಯು.ಟಿ. ಖಾದರ್ ಹಾಗೂ ಮುಖಂಡರ ಹೆಸರು ಯಕ್ಷಗಾನದ ಇತಿಹಾಸದಲ್ಲಿ ಮುಂದಿನ ಸಾವಿರಾರು ವರ್ಷಗಳ ಕಾಲ ಅಜರಾಮರವಾಗಿ ಉಳಿಯಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.