ಮಂಗಳೂರು : ಮಂಗಳೂರಿನಲ್ಲಿ ಪ್ರಪಂಚದಾದ್ಯಂತ ಹರಡಿರುವ ಕೊಂಕಣಿ ಮಾತನಾಡುವ ಸಮುದಾಯಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ‘ಕೊಂಕನಿಜ್’ (KONKANIZ) ಎಂಬ ಸಮುದಾಯ ಆಧಾರಿತ ನೂತನ ವೇದಿಕೆಯನ್ನು ಆರಂಭಿಸಲಾಗಿದೆ. ಮಂಡೋನ್ನಾ ಫೌಂಡೇಶನ್‌ನ ಡಾ. ಎವಿನ್ ಮಂಡೋನ್ನಾ ಅವರ ಸಕ್ರಿಯ ಬೆಂಬಲದೊಂದಿಗೆ ರೂಪುಗೊಂಡಿರುವ ಈ ವೇದಿಕೆಯು, ಕೊಂಕಣಿ ಭಾಷೆ, ಸಾಹಿತ್ಯ, ಆಹಾರ, ಸಂಗೀತ, ನೃತ್ಯ, ಚಲನಚಿತ್ರ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಬೆಳೆಸುವ ಕಾರ್ಯ ನಿರ್ವಹಿಸಲಿದೆ ಎಂದು ಡಾ. ವಿವೇಕ್ ಮೆಂಡೋನ್ಸ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದ ಭಾಗವಾಗಿ, ಸಂತ ಅಲೋಶಿಯಸ್ (ದೇಮ್ಡ್ ಟು ಬಿ ಯುನಿವರ್ಸಿಟಿ) ಕೊಂಕಣಿ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ‘ನಾಚೋಂ-ಯಾ ಕುಂಪಸಾರ್’ ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ಸೆಪ್ಟೆಂಬರ್ 18ರ ಶುಕ್ರವಾರ ಮಧ್ಯಾಹ್ನ 3:45ಕ್ಕೆ ವಿಶ್ವವಿದ್ಯಾಲಯ ಆವರಣದ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದರು. ಕೊಂಕಣಿ ವಿಭಾಗದ ಮುಖ್ಯಸ್ಥ ಫ್ಲೇವಿಯಾ ಕ್ಯಾಸ್ಟಲಿನೋ ಅವರ ನೇತೃತ್ವದಲ್ಲಿ, ರೋಚ್ ಫರ್ನಾಂಡಿಸ್ ಹಾಗೂ ಚಿತ್ರದ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ ಬಾರ್ಡ್ರಾಯ್ ಬಾರ್ರೆಟ್ಟೊ ಅವರ ಸಹಯೋಗದೊಂದಿಗೆ ಈ ಉಚಿತ ಪ್ರದರ್ಶನ ನಡೆಯಲಿದೆ ಎಂದರು.
24 ಅಂತಾರಾಷ್ಟ್ರೀಯ ಗೌರವಗಳು, 3 ರಾಷ್ಟ್ರೀಯ ಪ್ರಶಸ್ತಿಗಳು ಹಾಗೂ 10 ಗೋವಾ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಈ ಚಿತ್ರವು, 1960 ಮತ್ತು 70ರ ದಶಕದ ಗೋವಾದ ಸಂಗೀತ ಲೋಕ ಹಾಗೂ ಸಂಗೀತಗಾರರ ಬದುಕನ್ನು ಬಿಂಬಿಸುತ್ತದೆ. ಗೋವಾ ಮತ್ತು ಕರ್ನಾಟಕದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸುವ ಮತ್ತು ಯುವ ಪೀಳಿಗೆಗೆ ಕೊಂಕಣಿ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾಟಕ, ನೃತ್ಯ, ಸಾಹಿತ್ಯ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ‘ಕೊಂಕಣಿಜ್’ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪೌಲೋಸ್ ಏನ್. ವಿ, ರೆಕ್ಸ್ ಫೆರ್ನಾಂಡಿಸ್, ಅಂತೋನಿಯೋ ಫೆರ್ನಾಂಡಿಸ್ ಮತ್ತು ಟೈಟಸ್ ನೋರೋನ್ಹ ಉಪಸ್ಥಿತರಿದ್ದರು.