image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

KDP ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಆಹ್ವಾನ ನೀಡದಿರುವುದು ಖಂಡನೀಯ: ಲೋಕೇಶ್ ಪೂಜಾರಿ

KDP ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಿಗೆ ಆಹ್ವಾನ ನೀಡದಿರುವುದು ಖಂಡನೀಯ: ಲೋಕೇಶ್ ಪೂಜಾರಿ

ಮಂಗಳೂರು : ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಹಲವಾರು ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೆಡಿಪಿ (KDP) ಸಭೆಗೆ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ 15.09.2026 ಮಂಗಳವಾರ ನಡೆದ ಕೆಡಿಪಿ ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದಿರುವುದರಿಂದ ಸ್ಥಳೀಯ ಜನರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ನೇರವಾಗಿ ಮಂಡಿಸುವ ಅವಕಾಶ ತಪ್ಪಿದೆ ಎಂದು ಅಧ್ಯಕ್ಷ ಲೋಕೇಶ್ ಪೂಜಾರಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಪ್ರಮುಖವಾಗಿ PWD ರಸ್ತೆಗಳ ದುರಸ್ತಿ, MSEZ ನಿರಾಶ್ರಿತ ಕುಟುಂಬಗಳ ಉದ್ಯೋಗ ಸಮಸ್ಯೆ, MSEZ ವ್ಯಾಪ್ತಿಯ ಬಾಕಿ ತೆರಿಗೆ ವಸೂಲಾತಿ, MRPLಗೆ ಸಂಬಂಧಿಸಿದ 27 ಎಕರೆ ಹಸಿರು ವಲಯ ಭೂಸ್ವಾಧೀನ ಪ್ರಕ್ರಿಯೆ, ಹಾಗೂ ಶಾಂತಿಗುಡ್ಡೆ, ಧೂಮಾವತಿ ಧಾಮ ಮತ್ತು ಒಡ್ಡಿದಕಳ ಪ್ರದೇಶಗಳ ಪರಿಸರ ಸಮಸ್ಯೆಗಳ ಕುರಿತು ಚರ್ಚಿಸಲು ಉದ್ದೇಶಿಸಲಾಗಿತ್ತು ಎಂದರು. ಇದರೊಂದಿಗೆ ನಗರೋತ್ಥಾನ ಯೋಜನೆ 2022-23ನೇ ಸಾಲಿನ ಬಾಕಿ ಅನುದಾನ, 16ನೇ ಹಣಕಾಸು ಆಯೋಗದ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗ (SFC) ಅನುದಾನಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಲು ನಿರ್ಧರಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ಜವಾಬ್ದಾರಿಯಾಗಿದ್ದು, ಮುಂಬರುವ ದಿನಗಳಲ್ಲಿ ನಡೆಯುವ ಕೆಡಿಪಿ ಸೇರಿದಂತೆ ಜಿಲ್ಲಾ ಮಟ್ಟದ ಪ್ರಮುಖ ಸಭೆಗಳಿಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಅಥವಾ ಅಧಿಕೃತ ಪ್ರತಿನಿಧಿಗೆ ಭಾಗವಹಿಸಲು ಸೂಕ್ತ ಅವಕಾಶ ಕಲ್ಪಿಸಬೇಕೆಂದು ಅವರು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಶರ್ಮಿಳಾ ಶೆಟ್ಟಿ, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ,  ಪದ್ಮನಾಭ, ಜಯಂತ್ ಪೂಜಾರಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ