image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ದ್ವಿತೀಯ ಭಾಷೆಯಾಗಿ ತುಳು ಕಲಿಕೆಗೆ ಅವಕಾಶ ಕಲ್ಪಿಸಲು ತುಳು ಪರಿಷತ್ ಮನವಿ

ತುಳು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ದ್ವಿತೀಯ ಭಾಷೆಯಾಗಿ ತುಳು ಕಲಿಕೆಗೆ ಅವಕಾಶ ಕಲ್ಪಿಸಲು ತುಳು ಪರಿಷತ್ ಮನವಿ

ಮಂಗಳೂರು : ಮಂಗಳೂರಿನ ತುಳು ಪರಿಷತ್ ಸಂಘಟನೆಯು ತುಳು ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಸಂರಕ್ಷಣೆ ಹಾಗೂ ಬೆಳವಣಿಗೆಯ ಉದ್ದೇಶದಿಂದ 'ತುಳು ಅಭಿವೃದ್ಧಿ ನಿಗಮ' ಸ್ಥಾಪನೆ ಮಾಡಲು ಮತ್ತು ಶಾಲಾ-ಕಾಲೇಜುಗಳಲ್ಲಿ ತುಳು ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸಿಕೊಡುವಂತೆ ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ವಿನಂತಿ  ಸಲ್ಲಿಸಿದೆ ಎಂದು ಅಧ್ಯಕ್ಷರಾದ ಕೆ. ಸುಭೋದಯ ಆಳ್ವ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಕಳೆದ ಆರು ವರ್ಷಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ತುಳು ಪರಿಷತ್, ಪ್ರೌಢಶಾಲೆ ಹಾಗೂ ಪದವಿ ಮಟ್ಟದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ತುಳು ಭಾಷಾಭಿಮಾನ ಬೆಳೆಸಲು ಮತ್ತು ತುಳು ಸಾಹಿತ್ಯದ ಜಾಗೃತಿ ಮೂಡಿಸಲು 'ಬೃಹತ್ ವಿದ್ಯಾರ್ಥಿ ಸಮ್ಮೇಳನ'ಗಳನ್ನು ಆಯೋಜಿಸುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು. ಪ್ರಸ್ತುತ ತುಳು ಭಾಷೆಯ ಉಳಿವು ಹಾಗೂ ಪ್ರಸಾರಕ್ಕಾಗಿ ಸರ್ಕಾರದ ಹಂತದಲ್ಲಿ ಬೆಂಬಲದ ಅಗತ್ಯವಿದ್ದು, 'ತುಳು ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿದರೆ ಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ಪ್ರಗತಿ ಕಾಣಲು ನೆರವಾಗಲಿದೆ ಎಂದು ಸಂಘಟನೆ ಪರವಾಗಿ ತಿಳಿಸಿದರು.

ಇದರ ಜೊತೆಗೆ, ಶಾಲಾ-ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ದ್ವಿತೀಯ ಭಾಷೆಯಾಗಿ (Second Language) ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಲ್ಲಿ, ಯುವ ಪೀಳಿಗೆಗೆ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ತಲುಪಿಸಲು ಸೂಕ್ತ ವೇದಿಕೆ ದೊರೆತಂತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಯಾವುದೇ ಆರ್ಥಿಕ ಸಹಾಯ ಅಥವಾ ಸ್ವಂತ ಕಚೇರಿ, ನಿವೇಶನಗಳಿಲ್ಲದೆ ಕೇವಲ ಸಜ್ಜಾಯರ ಹಾಗೂ ಸಂಘಟಕರ ಶ್ರಮದಿಂದ ಈವರೆಗೆ ಕಾರ್ಯನಿರ್ವಹಿಸಿಕೊಂಡು ಬಂದಿರುವ ತುಳು ಪರಿಷತ್, ಇದೀಗ ಸರ್ಕಾರದ ನೆರವು ಮತ್ತು ಸಹಕಾರವನ್ನು ನಿರೀಕ್ಷಿಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಿಕೊಡುವಂತೆ  ಮನವಿ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ​ಡಾ. ಪ್ರಭಾಕರ್ ನಿಯರ್ಮಾರ್ಗ- ಗೌರವಾಧ್ಯಕ್ಷರು (ಸಾಹಿತಿ, ಲೇಖಕರು), ​ಬೆನ್ನೆಟ್ ಅಮ್ಮನ್ನ - ಪ್ರಧಾನ ಕಾರ್ಯದರ್ಶಿ (ಸಂಶೋಧಕರು), ಸುಮತಿ ಹೆಗಡೆ - ಖಜಾಂಚಿ, ಅಮಿತಾ ಅಶ್ವಿನ್ ಉಳ್ಳಾಲ್ - ಕಾರ್ಯದರ್ಶಿ, ಸುಧಾ ನಾಗೇಶ್ - ಕಾರ್ಯದರ್ಶಿ (ಸಾಹಿತಿ) ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ