image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಂಟರು ನಾಯಕತ್ವ ಗುಣ ಹಾಗೂ ಎದೆಗಾರಿಕೆಯುಳ್ಳ ಸಾಧಕರು: ಬಂಟ್ಸ್ ಹಾಸ್ಟೇಲ್ ಧಾರ್ಮಿಕ ಸಭೆಯಲ್ಲಿ ಇನಾಯತ್ ಆಲಿ ಬಣ್ಣನೆ

ಬಂಟರು ನಾಯಕತ್ವ ಗುಣ ಹಾಗೂ ಎದೆಗಾರಿಕೆಯುಳ್ಳ ಸಾಧಕರು: ಬಂಟ್ಸ್ ಹಾಸ್ಟೇಲ್ ಧಾರ್ಮಿಕ ಸಭೆಯಲ್ಲಿ ಇನಾಯತ್ ಆಲಿ ಬಣ್ಣನೆ

ಮಂಗಳೂರು: ಬಂಟ ಸಮುದಾಯದವರು ಸಮಾಜದ ಪ್ರತಿಯೊಂದು ರಂಗದಲ್ಲೂ ತಮ್ಮದೇ ಆದ ಅನನ್ಯ ಛಾಪು ಮೂಡಿಸಿದ್ದು, ಕೇವಲ ನಾಯಕತ್ವ ಗುಣ ಮತ್ತು ಎದೆಗಾರಿಕೆ ಮಾತ್ರವಲ್ಲದೆ ಇತರ ಸಮುದಾಯದವರನ್ನು ಪ್ರೀತಿಯಿಂದ ಕಾಣುವ ಉದಾರ ಗುಣವನ್ನು ಹೊಂದಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ತಿಳಿಸಿದರು.

ನಗರದ ಬಂಟ್ಸ್ ಹಾಸ್ಟೇಲ್‌ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಥಮ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಚಲನಚಿತ್ರ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಂಟ ಸಮುದಾಯ ನೀಡಿರುವ ಕೊಡುಗೆ ಅಪಾರವಾಗಿದ್ದು, ನಾಯಕತ್ವದ ಶಕ್ತಿಯಿಂದ ಸಮುದಾಯವು ಪ್ರತಿಯೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬರೋಡಾದ ಪ್ರಸಿದ್ಧ ಉದ್ಯಮಿ ಶಶಿಧರ ಶೆಟ್ಟಿ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವಗಳ ಮೂಲ ಆಶಯವೇ ಜನರಲ್ಲಿ ಐಕ್ಯತೆ ಮತ್ತು ಸಂಘಟನಾ ಶಕ್ತಿಯನ್ನು ಹೆಚ್ಚಿಸುವುದಾಗಿದೆ. ಬಂಟ್ಸ್ ಹಾಸ್ಟೇಲ್‌ನ ಸಿದ್ಧಿವಿನಾಯಕ ಪ್ರತಿಷ್ಠಾನದಲ್ಲಿ ನಡೆಯುವ ಈ ಉತ್ಸವವು ಅತ್ಯಂತ ಶಿಸ್ತು ಮತ್ತು ಬದ್ಧತೆಗೆ ಹೆಸರುವಾಸಿಯಾಗಿದೆ ಎಂದರು. ಉದ್ಯಮಿ ರಂಜಿತ್ ರೈ ಮಾತನಾಡಿ, ಇಲ್ಲಿನ ಆಚರಣೆಯು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಶುಭ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಪರಿಸರ ಮತ್ತು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾರ್ಲೆಟ್ ಪಿಂಟೋ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಖ್ಯಾತ ವೈದ್ಯ ಡಾ. ಡಿ. ಸುರೇಶ್ ರಾವ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬೇಲಾಡಿ ವಿಠಲ ಶೆಟ್ಟಿ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಜಗದೀಶ್ ಶೆಟ್ಟಿ ಮಿಂಜಾ, ಉದಯೋನ್ಮುಖ ಕುಸ್ತಿ ಪಟು ಶೌರ್ಯ ಶೆಟ್ಟಿ ಹಾಗೂ ರೂಪದರ್ಶಿ ಬ್ರಿನಾಳ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು. ಟಿ. ಖಾದರ್ ಸಮಾರಂಭಕ್ಕೆ ಆಗಮಿಸಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಮಾತೃ ಸಂಘದ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಟ್ರಸ್ಟಿಗಳಾದ ರವಿರಾಜ ಶೆಟ್ಟಿ ನಿಟ್ಟೆಗುತ್ತು, ಕೃಷ್ಣಪ್ರಸಾದ್ ರೈ, ಡಾ. ಆಶಾಜ್ಯೋತಿ ರೈ ಹಾಗೂ ವಿವಿಧ ಬಂಟರ ಸಂಘಗಳ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು, ತಿಮ್ಮಯ್ಯ ಶೆಟ್ಟಿ, ವಸಂತ ಶೆಟ್ಟಿ, ಆನಂದ ಶೆಟ್ಟಿ, ರಾಮಚಂದ್ರ ಕಾವ, ಮಿಥುನ್ ಹೆಗ್ಡೆ ಸೇರಿದಂತೆ ಅನೇಕ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ವಂದನಾರ್ಪಣೆ ನೆರವೇರಿಸಿದರು. ಸತೀಶ್ ಶೆಟ್ಟಿ ಕೊಡಿಯಾಲಬೈಲ್ ಹಾಗೂ ಡಾ. ಕವಿತಾ ಪಕ್ಕಳ ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ