image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಷನ್ ಮತ್ತು ಪಿ. ಎ. ಫಾರ್ಮಸಿ ಕಾಲೇಜು ನಡುವೆ ಒಪ್ಪಂದ

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಷನ್ ಮತ್ತು ಪಿ. ಎ. ಫಾರ್ಮಸಿ ಕಾಲೇಜು ನಡುವೆ ಒಪ್ಪಂದ

ಮಂಗಳೂರು :ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಘಟಕವಾದ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಷನ್ (FMHPD) ಹಾಗೂ ಮಂಗಳೂರಿನ ಪಿ. ಎ. ಫಾರ್ಮಸಿ ಕಾಲೇಜು ನಡುವೆ ಶೈಕ್ಷಣಿಕ ಮತ್ತು ಉದ್ಯಮ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ಈ ಸಹಭಾಗಿತ್ವವು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವುದು, ಸಂಶೋಧನೆ ಹಾಗೂ ನಾವೀನ್ಯತೆಯನ್ನು ಬೆಳೆಸುವುದು ಮತ್ತು ಫಾರ್ಮಸಿ ಕ್ಷೇತ್ರದಲ್ಲಿ ವೃತ್ತಿಪರ ಅಭಿವೃದ್ಧಿಯನ್ನು ಸಾಧಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆ. ಫಾ. ಫಾಸ್ಟಿನ್ ಲೂಕಾಸ್ ಲೋಬೊ ಅವರ ಉಪಸ್ಥಿತಿಯಲ್ಲಿ ಈ ಒಪ್ಪಂದ ಕಾರ್ಯಕ್ರಮ ನಡೆಯಿತು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಷನ್‌ನ ಆಡಳಿತಾಧಿಕಾರಿ ರೆ. ಫಾ. ನೆಲ್ಸನ್ ಧೀರಜ್ ಪಾಯಿಸ್ ಮತ್ತು ಪಿ. ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಹಾಗೂ ಫಾರ್ಮಾಕೊಗ್ನೋಸಿ ವಿಭಾಗದ ಪ್ರಾಧ್ಯಾಪಕ ಪ್ರೊ. ಸಲೀಮುಲ್ಲಾ ಖಾನ್ ಅವರು ತಮ್ಮ ಸಂಸ್ಥೆಗಳ ಪರವಾಗಿ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.

ಈ ಸಹಯೋಗದ ಕುರಿತು ಮಾತನಾಡಿದ ಪ್ರೊ. ಸಲೀಮುಲ್ಲಾ ಖಾನ್, ಈ ಒಪ್ಪಂದವು ಎರಡೂ ಸಂಸ್ಥೆಗಳ ನಡುವೆ ಅರ್ಥಪೂರ್ಣ ಶೈಕ್ಷಣಿಕ ಮತ್ತು ವೃತ್ತಿಪರ ತೊಡಗಿಸಿಕೊಳ್ಳುವಿಕೆಗೆ ಉತ್ತಮ ವೇದಿಕೆಯಾಗಲಿದೆ ಎಂದರು. ಪಿ. ಎ. ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಔಷಧೀಯ ಉತ್ಪಾದನಾ ಪ್ರಕ್ರಿಯೆಗಳು ಹಾಗೂ ಉದ್ಯಮದ ವೃತ್ತಿಪರ ತರಬೇತಿಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಇದು ನೆರವಾಗಲಿದೆ.

ಈ ಒಪ್ಪಂದದಡಿ ವಿದ್ಯಾರ್ಥಿಗಳಿಗೆ ಕೈಗಾರಿಕಾ ಭೇಟಿ, ಇಂಟರ್ನ್‌ಶಿಪ್, ಪ್ರಾಯೋಗಿಕ ತರಬೇತಿ, ಉಪನ್ಯಾಸಗಳು, ಕಾರ್ಯಾಗಾರಗಳು, ಬೋಧಕರ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಜಂಟಿ ಸಂಶೋಧನಾ ಯೋಜನೆಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ವೈಜ್ಞಾನಿಕ ಸಮಾವೇಶಗಳು ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಜಂಟಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ.

ಸಂಸ್ಥೆಯ ನಿರ್ದೇಶಕ ರೆ. ಫಾ. ಫಾಸ್ಟಿನ್ ಲೂಕಾಸ್ ಲೋಬೊ ಮಾತನಾಡಿ, ತರಗತಿಯ ಸೈದ್ಧಾಂತಿಕ ಕಲಿಕೆಯ ಜೊತೆಗೆ ಔಷಧ ಉತ್ಪಾದನಾ ವಾತಾವರಣದಲ್ಲಿ ಪ್ರತ್ಯಕ್ಷ ಅನುಭವ ಪಡೆಯಲು ಈ ಪಾಲುದಾರಿಕೆ ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಬೋಧಕ ಸಿಬ್ಬಂದಿಗೂ ಸಂಶೋಧನೆ ಮತ್ತು ಜ್ಞಾನ ವಿನಿಮಯದಲ್ಲಿ ಭಾಗವಹಿಸಲು ನೂತನ ಅವಕಾಶಗಳು ಲಭಿಸಲಿವೆ ಎಂದು ಅಭಿಪ್ರಾಯಪಟ್ಟರು.

1890ರಲ್ಲಿ ಸ್ಥಾಪನೆಯಾದ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಷನ್, ಫಾದರ್ ಮುಲ್ಲರ್ ಸಂಸ್ಥೆಯ ಅತ್ಯಂತ ಹಳೆಯ ಘಟಕವಾಗಿದ್ದು, ಗುಣಮಟ್ಟದ ಹೋಮಿಯೋಪಥಿ ಔಷಧಗಳ ಉತ್ಪಾದನೆಯಲ್ಲಿ ಸುಧೀರ್ಘ ಇತಿಹಾಸ ಹೊಂದಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಕಂಕನಾಡಿಯಲ್ಲಿ ರೆ. ಫಾ. ಅಗಸ್ಟಸ್ ಮುಲ್ಲರ್ ಎಸ್‌ಜೆ ಅವರಿಂದ ಆರಂಭಗೊಂಡ ಈ ಸಂಸ್ಥೆಯು "ಗುಣಮುಖಪಡಿಸಿ ಮತ್ತು ಉಪಶಮನ ನೀಡಿ" (Heal & Comfort) ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪಿ. ಎ. ಎಜುಕೇಶನಲ್ ಟ್ರಸ್ಟ್ ಅಡಿಯ ಪಿ. ಎ. ಫಾರ್ಮಸಿ ಕಾಲೇಜು ಸಹ ಅತ್ಯುತ್ತಮ ಶಿಕ್ಷಣ ಮತ್ತು ಸಂಶೋಧನೆಗೆ ಬದ್ಧವಾಗಿದೆ.

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ. ಡಾ. ಮೈಕಲ್ ಸಂತುಮಾಯೋರ್, ಆಸ್ಪತ್ರೆಯ ಆಡಳಿತಾಧಿಕಾರಿ ರೆ. ಫಾ. ಜಾರ್ಜ್ ಜೀವನ್ ಸಿಕ್ವೇರಾ, ಮೆಡಿಕಲ್ ಕಾಲೇಜಿನ ಡೀನ್ ಡಾ. ಆಂಟೋನಿ ಸಿಲ್ವನ್ ಡಿಸೋಜ, ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಭಟ್, ಫಾರ್ಮಾಸ್ಯುಟಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಐಕ್ಯೂಎಸಿ ಮುಖ್ಯಸ್ಥೆ ಅಶ್ವತಿ ಸಿ. ಮತ್ತು ಸಂಪರ್ಕಾಧಿಕಾರಿ ಡಾ. ಕೆಲ್ವಿನ್ ಪಾಯಿಸ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ