ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆಯಲ್ಲಿ ಕಾರ್ಯಾಚರಿಸುತ್ತಿದ್ದ ತುಳು ಸ್ನಾತಕೋತ್ತರ (ಎಂ.ಎ) ಅಧ್ಯಯನ ಕೇಂದ್ರವನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ಸ್ಥಳಾಂತರಿಸದೆ, ಹಂಪನಕಟ್ಟೆಯಲ್ಲೇ ಶಾಶ್ವತವಾಗಿ ಮುಂದುವರಿಸಬೇಕೆಂದು ‘ಪರಪು’ ತುಳು ಎಂ.ಎ ಹಿರಿಯ ವಿದ್ಯಾರ್ಥಿಗಳ ಸಂಘ (ರಿ.) ಆಗ್ರಹಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯವು 2018ರಲ್ಲಿ ಹಂಪನಕಟ್ಟೆಯ ಕಾಲೇಜಿನಲ್ಲಿ ಆರಂಭಿಸಿದ್ದ ತುಳು ಎಂ.ಎ ಅಧ್ಯಯನ ಕೇಂದ್ರದಿಂದಾಗಿ ಪುತ್ತೂರು, ಬೆಳ್ತಂಗಡಿ, ಬಂಟವಾಳ, ಉಡುಪಿ ಸೇರಿದಂತೆ ಉಭಯ ಜಿಲ್ಲೆಗಳ ಹಲವು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಅಲ್ಲದೆ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಈ ವಿಭಾಗಕ್ಕೆ ಗ್ರಂಥಾಲಯ ಹಾಗೂ ಪೀಠೋಪಕರಣಗಳನ್ನು ನೀಡಿ ಪ್ರೋತ್ಸಾಹಿಸಿದ್ದರು.
ಆದರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಈ ಕೋರ್ಸ್ ಅನ್ನು ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕೊಣಾಜೆಯ ವಿಶ್ವವಿದ್ಯಾನಿಲಯದ ಆವರಣಕ್ಕೆ ವರ್ಗಾಯಿಸುವ ತಪ್ಪು ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕೊಣಾಜೆಗೆ ಪ್ರಯಾಣಿಸಲು ಹಿಂಜರಿದು, ಪ್ರವೇಶಾತಿ ಸಂಖ್ಯೆ ತೀವ್ರವಾಗಿ ಕುಸಿದಿದ್ದು, ಕೊನೆಗೆ ಸೊನ್ನೆಗೆ ಬಂದು ತಲುಪಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷರಾದ ಶ್ರೀ ಹರೀಶ ತಿಳಿಸಿದ್ದಾರೆ.
ಹಂಪನಕಟ್ಟೆ ಕೇಂದ್ರವು ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತಲುಪಲು ಸುಲಭವಾದ ಮತ್ತು ಅನುಕೂಲಕರವಾದ ಸ್ಥಳವಾಗಿದೆ. ಆದ್ದರಿಂದ ವಿಶ್ವವಿದ್ಯಾನಿಲಯ ಹಾಗೂ ಸರ್ಕಾರವು ಈ ತಪ್ಪು ನಿರ್ಧಾರವನ್ನು ಹಿಂಪಡೆದು, ಹಂಪನಕಟ್ಟೆ ಯೂನಿವರ್ಸಿಟಿ ಕಾಲೇಜಿನಲ್ಲೇ ತುಳು ಎಂ.ಎ. ಕೇಂದ್ರವನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು. ಜೊತೆಗೆ, ತುಳು ಭಾಷೆಯನ್ನು ರಾಜ್ಯದಉಪಾಧ್ಯಕ್ಷರಾದ ಶ್ರೀ ಹರೀಶ ಎ., ದ್ವಿತೀಯ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತರಬೇಕೆಂದು ಸಂಘವು ಒತ್ತಾಯಿಸಿದ್ದು, ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದೂ ಮನವಿ ಮಾಡಿದರು.
ಈ ಪತ್ರಿಕಾಗೋಷ್ಟಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಸುಭಾಷ್ ಚಂದ್ರ ಕಣ್ಣ ತೀರ್ಥ ಮತ್ತು ಸದಸ್ಯರಾದ ಶ್ರೀಮತಿ ಗೀತಾ ಜೈನ್, ಶ್ರೀಮತಿ ಭಾಗ್ಯಶ್ರೀ ಶೆಟ್ಟಿ, ಶ್ರೀ ಶಿವರಾಮ ಶೆಟ್ಟಿ, ಶ್ರೀ ಚಂದ್ರಹಾಸ ಕಣಂತೂರು, ಶ್ರೀಮತಿ ಕಲಾಪತಿ ಪಿ., ಹಾಗೂ ಶ್ರೀಮತಿ ಜ್ಞಾನೇಶ್ವರಿ ಉಪಸ್ಥಿತರಿದ್ದರು.